ಚಿಕ್ಕಮಗಳೂರು | ನಕ್ಸಲ್ ಚಟುವಟಿಕೆ : ಪರಿಶೀಲನೆ ವೇಳೆ 3 ಬಂದೂಕು ಪತ್ತೆ, ತೀವ್ರಗೊಂಡ ಕಾರ್ಯಾಚರಣೆ
ಚಿಕ್ಕಮಗಳೂರು : ನಕ್ಸಲರ ಬಗ್ಗೆ ಸಹಾನುಭೂತಿಯುಳ್ಳ ಇಬ್ಬರನ್ನು ಸೋಮವಾರ ವಶಕ್ಕೆ ಪಡೆದಿರುವ ಪೊಲೀಸರು ಇಬ್ಬರನ್ನೂ ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಕಾರ್ಯಾಚರಣೆ ವೇಳೆ ಕೊಪ್ಪ ತಾಲೂಕಿನ ಕಡೆಗುಂಡಿ ಹಾಗೂ ಯಡಗುಂದ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ವೇಳೆ ಕಡೆಗುಂಡಿ ಗ್ರಾಮದ ಮನೆಯೊಂದರಲ್ಲಿ ಮೂರು ಬಂದೂಕುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಈ ಮನೆಗೆ ನಕ್ಸಲರ ತಂಡವೊಂದು ಭೇಟಿ ನೀಡಿದ್ದಾರೆಂಬ ಖಚಿತ ಸುಳಿವು ಪೊಲೀಸರಿಗೆ ಸಿಕ್ಕಿದೆ. ಪರಿಶೀಲನೆ ವೇಳೆ ಬಂದೂಕು ಸಿಕ್ಕಿರುವ ಹಿನ್ನೆಲೆಯಲ್ಲಿ ಜಯಪುರ ಪೊಲೀಸ್ ಠಾಣೆಯಲ್ಲಿ ನಕ್ಸಲ್ ನಾಯಕರಾದ ಮುಂಡಗಾರು ಲತಾ, ಜಯಣ್ಣ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಡಿಜಿಪಿ ಪ್ರಣಬ್ ಮೊಹಂತಿ ಅವರು ಎಸ್ಪಿ ಡಾ.ವಿಕ್ರಮ್ ಹಾಗೂ ಎಎನ್‍ಎಫ್ ಎಸ್ಪಿ ಜಿತೇಂದ್ರ ಕುಮಾರ್ ಅವರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಮಂಗಳವಾರ ಲಭ್ಯವಾಗಿದೆ.
ನಕ್ಸಲ್ ತಂಡದವರು ಕೊಪ್ಪ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ನಕ್ಸಲ್ ಸಹಾನುಭೂತಿಯುಳ್ಳ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಸೋಮವಾರ ಹಾಗೂ ಮಂಗಳವಾರ ತೀವ್ರ ಕಾರ್ಯಾಚರಣೆಯನ್ನೂ ನಡೆಸಲಾಗುತ್ತಿದೆ. ಚೆಕ್‍ಪೋಸ್ಟ್‌ಗಳಲ್ಲಿ ನಾಖಾಬಂಧಿ ಹಾಕಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಪಶ್ಚಿಮ ವಲಯ ಐಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಶೃಂಗೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಎಎನ್‍ಎಫ್ ಕ್ಯಾಂಪ್‍ನಲ್ಲಿದ್ದ ಸಿಬ್ಬಂದಿ ಏಕಕಾಲದಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆನ್ನಲಾಗುತ್ತಿದೆ. ಹಲವೆಡೆಗಳಲ್ಲಿ ಚೆಕ್‍ಪೋಸ್ಟ್ ಅಳವಡಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಎಎನ್‍ಎಫ್ ತಂಡ ಮಂಗಳವಾರ ಹಲವು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಕೇರಳದಿಂದ ಬೆಂಗಳೂರಿಗೆ ಬಂದಿದ್ದ ನಕ್ಸಲರಿಗೆ ಸಂಬಂಧಿಸಿದ ಪತ್ರವೊಂದನ್ನು ತರಲು ನಕ್ಸಲರ ಬಗ್ಗೆ ಅನುಕಂಪ ಹೊಂದಿದ್ದ ಮಲೆನಾಡು ಭಾಗದ ಇಬ್ಬರು ಯುವಕರು ತೆರಳಿದ್ದು, ಈ ವೇಳೆ ಇಬ್ಬರು ಯುವಕರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆಂದು ತಿಳಿದು ಬಂದಿದೆ. ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಸೋಮವಾರ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪಶ್ಚಿಮ ವಲಯದ ಐಜಿಪಿ ಹಾಗೂ ಅಮಿತ್ ಸಿಂಗ್, ಸಿಐಡಿ ಎಡಿಜಿಪಿ ಪ್ರಣಬ್ ಮೊಹಂತಿ ಸಮ್ಮುಖದಲ್ಲಿ ತೀವ್ರವಾಗಿ ವಿಚಾರಣೆಗೊಳಪಡಿಸಿದ್ದು, ವಿಚಾರಣೆ ವೇಳೆ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.