ಅಮಿತ್ ಶಾ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ : ಸಿ.ಟಿ.ರವಿ
ಚಿಕ್ಕಮಗಳೂರು : ಸತ್ಯಕ್ಕೂ-ಪ್ರಮಾಣಿಕತೆಗೂ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದು ಅಂಬೇಡ್ಕರ್‌ಗೆ ಕಾಂಗ್ರೆಸ್‍ಗೆ ಮಾಡಿದ ಅನ್ಯಾಯದ ಬಗ್ಗೆ, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೋಲಿಸಿದ ಬಗ್ಗೆ, ಆದರೆ ಕಾಂಗ್ರೆಸ್‍ನವರು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆಂದು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್, ಅವರು ನಿಧನರಾದಾಗ 6-3 ಅಡಿ ಜಾಗ ಕೊಡದೇ ಇದ್ದದ್ದು ಕಾಂಗ್ರೆಸ್, ಅವರ ಶವ ಸಾಗಿಸಿದ ವಿಮಾನದ ಬಾಡಿಗೆ ಕಟ್ಟಿಸಿ ಕೊಂಡಿದ್ದು ಕಾಂಗ್ರೆಸ್, ಭಾರತ ರತ್ನ ಕೊಡದೆ ಅಪಮಾನ ಮಾಡಿದ್ದು ಕೂಡ ಇದೇ ಕಾಂಗ್ರೆಸ್ ಪಕ್ಷ ಎಂದು ದೂರಿದರು.
ಈಗ ಸತ್ಯದ ತಲೆ ಮೇಲೆ ಹೊಡೆದಂತೆ ಅವರ ವರ್ತನೆಗಳಿವೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ 100ನೇ ಸಂಭ್ರಮದ ಸಮಾವೇಶ ಮಾಡುತ್ತಿದ್ದಾರೆ, ಈ ಬಗ್ಗೆ ಕಾಂಗ್ರೆಸ್‍ನವರು ಅವಲೋಕನ ಮಾಡಿಕೊಳ್ಳಬೇಕು. ಗಾಂಧೀಜಿ ಒಗ್ಗಟ್ಟಿನಲ್ಲಿ ಬಲ ಎಂದರೇ, ಈಗಿನ ಕಾಂಗ್ರೆಸ್‍ನವರು ಒಡೆದು ಆಳುವ ನೀತಿಯಲ್ಲಿ ಅಧಿಕಾರ ಸಿಗುತ್ತೆ ಅನ್ನುವವರು, ಅಧಿಕಾರಕ್ಕಾಗಿ ಬ್ರಿಟಿಷರ ಕುಟೀಲ ನೀತಿ ಇಟ್ಟುಕೊಂಡಿರುವವರು. ಆತ್ಮಾವಲೋಕನ ಮಾಡಿಕೊಂಡರೆ ಗಾಂಧಿ ಸ್ಮರಣೆಯ ಲಾಭ ಆದೀತು ಎಂದು ಟೀಕಿಸಿದರು.
ತನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಕುರಿತು ಮಾತನಾಡಿ, ಖಾಸಗಿಯಾಗಿ ನಾನೇಕೆ ಎಫ್.ಎಸ್.ಎಲ್ ತನಿಖೆ ಮಾಡಿಸಲಿ, ನನ್ನ ಮೇಲೆ ಆರೋಪ ಮಾಡಿರುವುದು ಸಚಿವರು, ಎಫ್.ಎಸ್.ಎಲ್ ವರದಿ ಬರುವ ಮುಂಚೆಯೇ ನನ್ನನ್ನ ಬಂಧನ ಮಾಡಿಸಿದ್ದಾರೆ. ನನ್ನನ್ನ ಅರೆಸ್ಟ್ ಮಾಡಿಸಲು ಕಾಣದ ಕೈ ಕೆಲಸ ಮಾಡಿವೆ. ಅದೇ ಕಾಣದ ಕೈ ಎಫ್.ಎಸ್.ಎಲ್ ಹಾಗೂ ಸಿಐಡಿ ತನಿಖೆ ಮೇಲೂ ಕೆಲಸ ಮಾಡಬಹುದು ಎಂದರು.
ಖಾಸಗಿಯಾಗಿ ಕಾಲ್ ಲೀಸ್ಟ್ ತೆಗೆಸಲು ಬರುವುದಿಲ್ಲ, ತನಿಖೆ ನಡೆಸಬೇಕು. ಅದಕ್ಕೆ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಲಿ, ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿರಲ್ಲ ಎಂದರು.
ಕಾಂಗ್ರೆಸ್ ಅಧಿವೇಶನದ 100ವರ್ಷಗಳ ಸಂಭ್ರಮ ಸಮಾವೇಶದಲ್ಲಿ ದೇಶನ ನಕ್ಷೆಯನ್ನು ವಿರೂಪಗೊಳಿಸಲಾಗಿದೆ, ಕಾಶ್ಮೀರವನ್ನು ತುಂಡರಿಸುವ ಕೆಲಸ ಮಾಡಿದ್ದಾರೆಂದರೆ ಇವರ ಮನಸ್ಥಿತಿ ಅರ್ಥವಾಗುತ್ತದೆ. ಕಾಂಗ್ರೆಸ್ ವಿಸರ್ಜಿಸಬೇಕು ಎಂದು ಹಿಂದೆಯೇ ಮಹಾತ್ಮ ಗಾಂಧಿಗೆ ಹೇಳಿದ್ದರು. ಗಾಂಧಿ ಸ್ಮರಣೆ ಮಾಡುವಾಗ ಗಾಂಧಿ ಹೇಳಿದ ಮಾತನ್ನು ಪಾಲಿಸಬೇಕು ಎಂದು ತಿಳಿಸಿದರು.