ಲೋಕಸಭಾ ಚುನಾವಣೆ ಘೋಷಣೆ ಆಗುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್: ಬಿ.ವೈ. ವಿಜಯೇಂದ್ರ

Update: 2024-01-31 10:33 GMT

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಘೋಷಣೆ ಗೆ ಮೊದಲೇ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದೆ ಇದ್ದರೆ ಗ್ಯಾರಂಟಿಗಳು ರದ್ದು ಮಾಡುವ ಕುರಿತ ಮಾಗಡಿಯ ಕಾಂಗ್ರೆಸ್ ಶಾಸಕರ ಹೇಳಿಕೆಯನ್ನು ಗಮನಿಸಿದ್ದೇನೆ ಎಂದ ಅವರು, ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದರು. ವಾಸ್ತವ ಸ್ಥಿತಿ ಅವರಿಗೆ ಈಗ ಅರ್ಥ ಆಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಒಗ್ಗೂಡಿ 28ರಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಲ್ಲೂ ತಮ್ಮ ಹೇಳಿಕೆ ಕುರಿತು ಅನುಮಾನ ಶುರುವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ಚುನಾವಣಾ ಫಲಿತಾಂಶ ಹಾಗೂ ಬಿಜೆಪಿ ಗೆಲುವು, ಮತ್ತೊಂದು ಕಡೆ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಇಡೀ ದೇಶದಲ್ಲಿ, ಕರ್ನಾಟಕ ರಾಜ್ಯದಲ್ಲೂ ಸಹ ನಿರ್ಮಾಣವಾದ ವಾತಾವರಣದಿಂದ ಕಾಂಗ್ರೆಸ್ಸಿಗರು ಭಯಭೀತರಾಗಿದ್ದಾರೆ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ ಪಕ್ಷದವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೋಗಸ್ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ಸೋಲನ್ನು ಈಗಾಗಲೇ ಕಾಂಗ್ರೆಸ್ ಮುಖಂಡರು ಒಪ್ಪಿಕೊಳ್ಳುತ್ತಿದ್ದಾರೆ.  ರಾಜ್ಯದ ಜನರಿಗೆ ಅನ್ಯಾಯ ಮಾಡಲು ಬಿಜೆಪಿ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಇವರ ಕಿವಿ ಹಿಂಡಿ ಕೆಲಸ ಮಾಡಿಸುವ ಶಕ್ತಿ ನಮಗಿದೆ ಎಂದು ತಿಳಿಸಿದರು. ಅದನ್ನು ವಿರೋಧ ಪಕ್ಷವಾಗಿ ನಾವು ಮಾಡುತ್ತೇವೆ ಎಂದು ನುಡಿದರು.

ಇವರ ಗ್ಯಾರಂಟಿ ವಿರುದ್ಧ ರಾಜ್ಯದ ಜನರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಇವತ್ತು ಬಸ್ ವ್ಯವಸ್ಥೆ ಇಲ್ಲ. ಬರಗಾಲದ ಸಂದರ್ಭದಲ್ಲಿ ರೈತರು ಇವತ್ತು ಅವರ ಪಂಪ್‍ಸೆಟ್‍ಗಳಿಗೆ ತ್ರಿಫೇಸ್ ವಿದ್ಯುತ್ ಕೊಡಲು ರಾಜ್ಯ ಸರಕಾರಕ್ಕೆ ಆಗುತ್ತಿಲ್ಲ. ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ? ಇವರ ಗ್ಯಾರಂಟಿ ಬಗ್ಗೆ ಜನರು ಈಗಾಗಲೇ ವಿಶ್ವಾಸ ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ಗ್ಯಾರಂಟಿ ಆಧಾರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು, ಈಗಾಗಲೇ ಸೋಲನ್ನು ಒಪ್ಪಿಕೊಳ್ಳುತ್ತಿದೆ. ಅಲ್ಲದೆ, ಬ್ಲ್ಯಾಕ್‍ಮೇಲ್ ತಂತ್ರವನ್ನೂ ಅನುಸರಿಸಲು ಹೊರಟಿದ್ದಾರೆ. ಇದನ್ನು ನೋಡಿ ಬಿಜೆಪಿ ಕಣ್ಮುಚ್ಚಿಕೊಂಡು ಕೂರುವುದಿಲ್ಲ ಎಂದರು.

ಮಂಡ್ಯದ ಘಟನೆಯನ್ನು ಬಿಜೆಪಿ- ಜೆಡಿಎಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ತೆಗೆದುಕೊಂಡ ತೀರ್ಮಾನ, ಅಲ್ಲಿ ಧ್ವಜಸ್ತಂಭ ನಿರ್ಮಿಸಿದ್ದೇ ಹನುಮನಧ್ವಜ ಹಾರಿಸಲು. ಅವರ ಭಾವನೆಗೆ ವಿರುದ್ಧವಾಗಿ ರಾಜ್ಯ ಸರಕಾರ ನಡೆದುಕೊಂಡಿದೆ. ಜನವರಿ 26ರಂದು ಅಲ್ಲಿ ರಾಷ್ಟ್ರಧ್ವಜ ಹಾರಿಸಿ ಗೌರವ ಕೊಟ್ಟಿದ್ದಾರೆ. ಆದರೆ, ಯಾವುದೋ ಸಮಯದಲ್ಲಿ ಮನಸ್ಸಿಗೆ ಇಚ್ಛೆ ಬಂದಂತೆ ರಾಷ್ಟ್ರಧ್ವಜ ಹಾರಿಸಿದ ಸರಕಾರವು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದೆ. 108 ಅಡಿ ಧ್ವಜಸ್ತಂಭ ಇದ್ದಾಗ ಯಾವ ಅಳತೆಯ ಧ್ವಜ ಇರಬೇಕು; ಯಾವುದನ್ನೂ ಲೆಕ್ಕಿಸದೆ ರಾಷ್ಟ್ರಧ್ವಜಕ್ಕೆ ಅನ್ಯಾಯ, ಅವಮಾನ ಮಾಡಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷ. ಅವರು ಮೊದಲು ದೇಶದ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‍ನವರು ದ್ವಂದ್ವದಲ್ಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೂ ಕೂಡ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕೋ ಆ ರೀತಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ರಾಜ್ಯದಲ್ಲಿರುವ ಎಲ್ಲ ರಾಮಭಕ್ತರು ಈ ದುಷ್ಟ ಕಾಂಗ್ರೆಸ್ ಸರಕಾರದ ನಡವಳಿಕೆಯನ್ನು ಗಮನಿಸುತ್ತಿದ್ದಾರೆ. ನಮ್ಮ ರಾಜ್ಯ, ನಮ್ಮ ದೇಶದಲ್ಲಿ ಹನುಮಧ್ವಜ ಹಾರಿಸಲು ಕಾಂಗ್ರೆಸ್ಸಿನವರು ವಿರೋಧ ವ್ಯಕ್ತಪಡಿಸುವುದಾದರೆ, ಇದು ನಾಚಿಕೆಗೇಡಿನ ಸಂಗತಿ. ಇದನ್ನು ನೋಡಿ ಯಾರೇ ರಾಮಭಕ್ತರು ಕಣ್ಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News