ನನಗೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆಯ ಅಗತ್ಯವಿಲ್ಲ, ಬೆದರಿಕೆಗೆ ಜಗ್ಗಲ್ಲ : ಸಿ.ಟಿ.ರವಿ

Update: 2024-12-23 16:06 GMT

ಸಿ.ಟಿ.ರವಿ

ಚಿಕ್ಕಮಗಳೂರು : ನನಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆಯ ಅಗತ್ಯವಿಲ್ಲ, ಅವರ ಬೆದರಿಕೆಗೆ ಜಗ್ಗಲ್ಲ. ಬೆಳಗಾವಿ ರಿಪಬ್ಲಿಕ್ ಆಗಲು ನಾವೂ ಅವಕಾಶ ಕೊಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದೈಹಿಕ ಹಲ್ಲೆ ನಡೆದಿರುವುದಕ್ಕೆ ಕಿಶೋರ್ ಅರುಣ್ ಎಂಬವರು ದೂರು ನೀಡಿದ್ದಾರೆ. ಸುವರ್ಣಸೌಧದ ಪಶ್ಚಿಮ ಬಾಗಿಲಿನಲ್ಲಿ ಹಲ್ಲೆಗೆ ಮುಂದಾದ ವೇಳೆ ಕಿಶೋರ್ ಅರುಣ್ ನನ್ನ ಜತೆಯಲ್ಲಿದ್ದರು. ಹಾಗಾಗಿ ದೂರು ನೀಡಿದ್ದಾರೆ, ಪೊಲೀಸರು ಯಾವ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ ಎಂದರು.

ಖಾನಾಪುರದಲ್ಲಿ ನಾನು ದೂರು ನೀಡಿದ್ದು, ನನಗೆ ಎಫ್‍ಐಆರ್ ಪ್ರತಿ ನೀಡಿಲ್ಲ. ಎಫ್‍ಐಆರ್ ಕಾಪಿ ಪಡೆಯಲು ನಮ್ಮವರು ಹೋಗಿದ್ದರೂ ಪೊಲೀಸ್ ಕಮಿಷನರ್ 15 ದಿನ ಟೈಮ್ ಇದೆ ಎಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಪ್ರತ್ಯೇಕ ಕಾನೂನಿಲ್ಲ. ನನ್ನ ದೂರಿಗೂ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಕಮಿಷನರ್ ಆ ಜಾಗದಲ್ಲಿರಲು ಸೂಕ್ತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಲೆಗೆ ಮುಂದಾದಾಗ ಸ್ಥಳದಲ್ಲಿದ್ದವರು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಡೆಯವರು, ಅವರ್ಯಾರೂ ಅಪರಿಚಿತರಲ್ಲ. ಇಬ್ಬರು ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹಾಗೂ ಬಹುತೇಕ ಮುಸ್ಲಿಮರು ಇದ್ದರು. ಮಾಹಿತಿ ಸಂಗ್ರಹಿಸಿದ್ದೇನೆ. ಎಲ್ಲವನ್ನೂ ಸಂಬಂಧಪಟ್ಟವರಿಗೆ ನೀಡುತ್ತೇನೆ. ಎಲ್ಲರ ಹೆಸರು ಹಾಕಿ ದೂರು ನೀಡಿದ್ದೇನೆ, ನನ್ನ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಅವರ ಮೇಲೆ ಏಕಿಲ್ಲ ಎಂದು ಪ್ರಶ್ನಿಸಿದರು.

ಸಿ.ಟಿ.ರವಿಗೆ ಏನೂ ಆಗಿಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‍ನವರು ತುರ್ತುಪರಿಸ್ಥಿತಿ ಮನೋಸ್ಥಿತಿಯಿಂದ ಹೊರಬರಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ಏನು ಡಾಕ್ಟರ್ ಅಲ್ಲ. ತಲೆಗೆ ಗಾಯವಾದ ಬಳಿಕವೂ ಮೂರು ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ಕೊಡಿಸಿಲ್ಲ. ಖಾನಪುರದಲ್ಲಿ ಗಾಯವಾದರೇ, ರಾಮದುರ್ಗದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅವರ ತಪ್ಪು ಮುಚ್ಚಿಕೊಳ್ಳಲು ಆ ತಾಯಿ ಸುಳ್ಳುಗಳ ಸರಮಾಲೆಯನ್ನು ಸುರಿಸುತ್ತಿದ್ದಾರೆ. ಸುಳ್ಳನ್ನು ಸೋಲಿಸಬಹುದು ಆದರೆ, ಸತ್ಯವನ್ನು ಸೋಲಿಸಲು ಆಗಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News