ಹಾಸ್ಟೆಲ್‍ಗಳ ಅವಹೇಳನ: ಸಿ.ಟಿ. ರವಿ ರವಿ ವಿರುದ್ದ ಪ್ರಕರಣ ದಾಖಲಿಸಲು ಆಗ್ರಹ
ಚಿಕ್ಕಮಗಳೂರು: ಸರಕಾರಿ ಹಾಸ್ಟೆಲ್‍ಗಳಲ್ಲಿ ನಕ್ಸಲರು ತಂಗುತ್ತಾರೆ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ನಕ್ಸಲ್ ಚಳವಳಿಗೆ ನೇಮಕ ಮಾಡಿಕೊಳ್ಳುತ್ತಾರೆಂದು ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸರಕಾರಿ ಹಾಸ್ಟೆಲ್‍ಗಳು ಮತ್ತು ಅಲ್ಲಿ ವ್ಯಾಸಂಗ ಮಾಡುತ್ತಿರುವ ದುಡಿಯುವ ವರ್ಗದ ಮಕ್ಕಳನ್ನು ಅವಮಾನಿಸಿದ್ದಾರೆ. ಸಿ.ಟಿ.ರವಿ ಹೇಳಿಕೆಯಿಂದಾಗಿ ಹಾಸ್ಟೆಲ್ ಮಕ್ಕಳು ಹಾಗೂ ಅವರ ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ತಮ್ಮ ಹೇಳಿಕೆಗೆ ಸಿ.ಟಿ.ರವಿ ಕೂಡಲೇ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಹಳ್ಳಿಹಳ್ಳಿಗಳಲ್ಲೂ ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಎಚ್ಚರಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಕಳೆದ 20ವರ್ಷಗಳಿಂದ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದು, ಎರಡು ಬಾರಿ ಸಚಿವರಾಗಿದ್ದರು. ಶಿಕ್ಷಣ ಸಚಿವರೂ ಆಗಿದ್ದ ಅವರು ಡಾಕ್ಟರೆಟ್ ಪಡೆದಿರುವುದಲ್ಲದೇ ಸದ್ಯ ವಿಧಾನ ಪರಿಷತ್ ಸದಸ್ಯರೂ ಆಗಿದ್ದಾರೆ. ಇಂತಹ ಜವಬ್ದಾರಿಯುತ ಸ್ಥಾನದಲ್ಲಿದ್ದರೂ ಅವರು ಬಾಯಿಗೆ ಬಂದಂತೆ ಮಾತನಾಡುವುದನ್ನೂ ಇನ್ನೂ ನಿಲ್ಲಿಸಿಲ್ಲ. ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯನ್ನು ಮರೆತಿದ್ದ ಅವರು ಕೋಮುವಾದ ಬಿತ್ತುವುದು, ವಿರೋಧ ಪಕ್ಷದವರನ್ನು ಟೀಕಿಸುವುದು, ಅವಮಾನಿಸುವದನ್ನೇ ವೃತ್ತಿ ಮಾಡಿಕೊಂಡಿದ್ದರು. ಇದರಿಂದ ಬೇಸತ್ತ ಕ್ಷೇತ್ರದ ಜನತೆ ಅವರನ್ನು ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದ್ದರು. ಇದರಿಂದ ಪಾಠ ಕಲಿಯದ ಅವರು ಪ್ರಚಾರಕ್ಕೋ, ತೆವಲಿಗೋ ಮತ್ತೆ ನಾಲಗೆ ಹರಿಬಿಡುತ್ತಿದ್ದಾರೆ. ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳ ವ್ಯಾಸಂಗಕ್ಕೆ ಆಶ್ರಯ ನೀಡುತ್ತಿರುವ ಸರಕಾರಿ ಹಾಸ್ಟೆಲ್‍ಗಳ ಬಗ್ಗೆ ಅತ್ಯಂತ ತುಚ್ಛವಾಗಿ ಮಾತನಾಡಿರುವ ಅವರ ಹೇಳಿಕೆ ಖಂಡನೀಯ. ತಮ್ಮ ಹೇಳಿಕೆಗೆ ಅವರು ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದರು.
ನಕ್ಸಲ್ ಚಳವಳಿ ಇಂದು ನಿನ್ನೆಯದ್ದಲ್ಲ, ಜಿಲ್ಲೆಯಲ್ಲಿ ಈ ಹೋರಾಟಕಕ್ಕೆ ಅನೇಕ ದಶಕಗಳ ಇತಿಹಾಸವಿದೆ. ಆದರೆ ವಿಕ್ರಂಗೌಡ ಎಂಬವರ ಎನ್‍ಕೌಂಟರ್ ಬಳಿಕ ಸಿ.ಟಿ.ರವಿ ಅವರು ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿದ್ದ ಸಭೆಯೊಂದರಲ್ಲಿ ಸರಕಾರಿ ಹಾಸ್ಟೆಲ್‍ಗಳ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿ ಹಾಸ್ಟೆಲ್‍ನಲ್ಲಿರುವ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದಂತಹ ದುಡಿಯುವ ವರ್ಗದವರ ಮಕ್ಕಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಸರಕಾರಿ ಹಾಸ್ಟೆಲ್‍ಗಳಲ್ಲಿ ನಕ್ಸಲರು ತಂಗುತ್ತಾರೆ, ನಕ್ಸಲ್ ವಿಚಾರಗಳನ್ನು ಮಕ್ಕಳ ತಲೆಗೆ ತುಂಬಿ ಶಾಲಾ ಕಾಲೇಜು ಮಕ್ಕಳನ್ನು ನಕ್ಸಲ್ ಚಳವಳಿಗೆ ನೇಮಿಸಿಕೊಳ್ಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ಹಾಸ್ಟೆಲ್‍ಗಳಲ್ಲಿರುವ ಲಕ್ಷಾಂತರ ಬಡ ಮಕ್ಕಳನ್ನು ಅವರು ಅವಮಾನಿಸಿದ್ದಾರೆ. ಸರಕಾರಿ ಹಾಸ್ಟೆಲ್‍ಗಳನ್ನು ಸಾರ್ವಜನಿಕರು ಸಂಶಯದಿಂದ ನೋಡುವಂತೆ ಮಾಡಿದ್ದಾರೆ. ಸಿ.ಟಿ.ರವಿ ಹೇಳಿಕೆಯಿಂದಾಗಿ ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಗೊಂದಲಕ್ಕೊಳಗಾಗುವಂತಾಗಿದೆ ಎಂದು ದೂರಿದರು.
ಸರಕಾರಗಳು ಬಡ ವರ್ಗದವರ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಸಾವಿರಾರು ಹಾಸ್ಟೆಲ್‍ಗಳನ್ನು ನಿರ್ಮಿಸಿ ಕೋಟ್ಯಂತರ ರೂ. ಖರ್ಚು ಮಾಡಿ ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು ನೀಡುತ್ತಿದೆ. ಇಂತಹ ಹಾಸ್ಟೆಲ್‍ಗಳಲ್ಲಿ ಉಳಿದುಕೊಂಡು ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಸರಕಾರಿ ಹಾಸ್ಟೆಲ್‍ಗಳು ಶೋಷಿತ, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣದಂತೆ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಕೋಮುವಾದ ಬಿತ್ತುತ್ತಾ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಸಿ.ಟಿ.ರವಿ ಹೇಳಿಕೆಯಿಂದಾಗಿ ಹಾಸ್ಟೆಲ್‍ಗಳು ಮತ್ತು ಅಲ್ಲಿರುವ ಮಕ್ಕಳನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಭವಿಷ್ಯದಲ್ಲಿ ಬಡ ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್‍ಗಳಿಗೆ ಕಳುಹಿಸಲು ಹಿಂದೇಟು ಹಾಕಿದರೇ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾರ ಎದುರಾಗಿದೆ. ಸಿ.ಟಿ.ರವಿಗೆ ಹಾಸ್ಟೆಲ್‍ಗಳಲ್ಲಿ ನಕ್ಸಲರು ತಂಗುವ ವಿಚಾರ ಮೊದಲೇ ಗೊತ್ತಿದ್ದರೇ ತಮ್ಮ ಸರಕಾರದ ಅವದಿಯಲ್ಲಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ತನಿಖೆಗೆ ಆದೇಶಿಸಿ ಕ್ರಮಕೈಗೊಳ್ಳಬಹುದಿತ್ತು, ಅದರೆ ಅವರು ಅದನ್ನು ಅಂದು ಮಾಡದೇ ಈಗ ಬಡ ಮಕ್ಕಳು ಓದುತ್ತಿರುವ ಹಾಸ್ಟೆಲ್‍ಗಳ ವಿರುದ್ಧ ಅಪಸ್ವರ ಎತ್ತಿದ್ದೇಕೆ? ಎಂದು ಪ್ರಶ್ನಿಸಿದ ಅವರು, ಸಿ.ಟಿ.ರವಿ ಹೇಳಿಕೆ ಹಿಂದೆ ಹಾಸ್ಟೆಲ್‍ಗಳಲ್ಲಿ ಓದುತ್ತಿರುವ ದುಡಿಯುವ ವರ್ಗದ ಮಕ್ಕಳ ತಲೆಗೆ ನಕ್ಸಲ್ ಹಣೆಪಟ್ಟಿ ಕಟ್ಟುವ ಹುನ್ನಾರ ಅಡಗಿದ್ದು, ಕೋಮುವಾದಿಗಳಿಗೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಶಿಕ್ಷಣ ಪಡೆಯುವುದನ್ನು ಸಹಿಸುವುದಿಲ್ಲ. ಸಿ.ಟಿ.ರವಿ ಹೇಳಿಕೆ ಹಿಂದೆ ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಸಿ.ಟಿ.ರವಿ ಹೇಳಿಕೆಯಿಂದಾಗಿ ಸರಕಾರಿ ಹಾಸ್ಟೆಲ್‍ಗಳನ್ನು ಅನುಮಾನದಿಂದ ನೋಡುವಂತಾಗಿದ್ದು, ಹಾಸ್ಟೆಲ್ ಮಕ್ಕಳು ಮತ್ತವರ ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಬಡಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದ ಹಾಸ್ಟೆಲ್ ವ್ಯವಸ್ಥೆಯನ್ನೇ ಮುಚ್ಚಿಸುವಂತಹ ಹೇಳಿಕೆ ನೀಡಿರುವ ಸಿ.ಟಿ.ರವಿ ಹೇಳಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಅವರನ್ನು ತನಿಖೆಗೆ ಒಳಪಡಿಸಬೇಕು. ನಕ್ಸಲರು ಹಾಸ್ಟೆಲ್‍ಗಳಲ್ಲಿ ತಂಗುವ ವಿಚಾರದ ಬಗ್ಗೆ ಅವರಿಗೆ ಮಾಹಿತಿ ಗೊತ್ತಿದ್ದರೇ ಅವರಿಗೆ ನಕ್ಸಲರ ಬಗ್ಗೆ ಎಲ್ಲ ಮಾಹಿತಿ ಇದ್ದಂತಿದೆ. ಈ ಕಾರಣಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ದಸಂಸ ಮುಖಂಡ ಕೆ.ಸಿ.ವಸಂತ್ ಕುಮಾರ್ ಮಾತನಾಡಿ, ದಸಂಸಕ್ಕೆ 50 ವರ್ಷಗಳ ಇತಿಹಾಸವಿದ್ದು, ಈ ಸಂಘಟನೆ ಹಾಸ್ಟೆಲ್ ವಿದ್ಯಾರ್ಥಿಗಳೂ ಸೇರಿದಂತೆ ಶಾಲಾ ಕಾಲೇಜು ಮಕ್ಕಳಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಜಾತೀಯತೆ, ಅಸ್ಪೃಶ್ಯತೆ, ಕೋಮುವಾದದಂತಹ ಸಾಮಾಜಿಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿದೆ. ವಿದ್ಯಾರ್ಥಿಗಳನ್ನು ಜಾಗೃತರನ್ನಾಗಿಸುವ ಕೆಲಸ ಮಾಡುತ್ತಿದೆ. ಸಿ.ಟಿ.ರವಿ ಹೇಳಿಕೆಯಿಂದಾಗಿ ಪ್ರಜಾಪ್ರಭುತ್ವವಾದಿ, ಅಂಬೇಡ್ಕರ್ ವಾದಿ ಸಂಘಟನೆಗಳಿಗೆ ಅಪಮಾನ ಆಗಿದೆ. ಆದ್ದರಿಂದ ಸಿ.ಟಿ.ರವಿ ಕೂಡಲೇ ಕ್ಷಮೆಯಾಚಿಸಬೇಕು. ಡಿಸಿ, ಎಸ್ಪಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು, ತಪ್ಪಿದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪುಟ್ಟಸ್ವಾಮಿ, ನಟರಾಜ್, ಅಣ್ಣಯ್ಯ, ಭೀಮ್ ಆರ್ಮಿ ಸಂತೊಷ್ ಉಪಸ್ಥಿತರಿದ್ದರು.