ಟ್ರೆಕ್ಕಿಂಗ್ ನಕಲಿ ಟಿಕೆಟ್ ಸೃಷ್ಟಿಸಿ ವಂಚನೆ; ಕಳಸ ಡಿಆರ್ ಎಫ್ಒ ಅಮಾನತು

Update: 2024-08-27 04:58 GMT

ಚಿಕ್ಕಮಗಳೂರು, ಆ.27: ನಕಲಿ ಟಿಕೆಟ್ ಗಳನ್ನು ಸೃಷ್ಟಿಸಿ ಚಾರಣಕ್ಕೆ ಅಕ್ರಮವಾಗಿ ಅವಕಾಶ ನೀಡಿದ ಆರೋಪದ ಮೇರೆಗೆ ಕೊಪ್ಪ ಅರಣ್ಯ ವಿಭಾಗದ ಕಳಸ ಉಪ ವಲಯಾರಣ್ಯಾಧಿಕಾರಿಯನ್ನು ಅಮಾನತು ಮಾಡಿ ಅರಣ್ಯ ಇಲಾಖೆ ಆದೇಶಿಸಿದೆ.

ಕಳಸ ಉಪ ಅರಣ್ಯ ವಲಯದ ಡಿಆರ್ ಎಫ್ಒ ಚಂದನ್ ಗೌಡ ದ್ಯಾಮನ ಗೌಡ ಅಮಾತುಗೊಂಡಿರುವ ಅರಣ್ಯ ಇಲಾಖೆ ಅಧಿಕಾರಿ. ಇವರು ಮೂಡಿಗೆರೆ ತಾಲೂಕಿನ ರಾಣಿ ಝರಿ ಹಾಗೂ ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣಗಳಿಗೆ ಚಾರಣಕ್ಕೆ ಹೋಗಲು ಆನ್ಲೈನ್ ಟಿಕೆಟ್ ಅನ್ನು ನಕಲು ಮಾಡಿ ಚಾರಣಿಗರಿಗೆ ಮಾರಾಟ ಮಾಡಿದ್ದಾರೆ. ಟಿಕೆಟ್ ಹಣವನ್ನು ಪೋನ್ ಪೇ ಮೂಲಕ ಮೋನಿಕಾ ಎಂಬವರ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ರಾಣಿ ಝರಿ, ಬಲ್ಲಾಳರಾಯನ ದುರ್ಗದಂತಹ ಪ್ರವಾಸಿ ತಾಣಗಳ ಚಾರಣಕ್ಕೆ ಆನ್ ಲೈನ್ನಲ್ಲಿ ಬುಕ್ಕಿಂಗ್ ಮಾಡಬೇಕಿದ್ದು, ಪ್ರತೀ ಟಿಕೆಟ್ಗೆ 250 ರೂ. ಪಾವತಿಸಬೇಕಿದೆ. ಆನ್ಲೈನ್ ಬುಕ್ಕಿಂಗ್ ಉಸ್ತುವಾರಿಯನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದ್ದು, ಇತ್ತೀಚೆಗೆ ವ್ಯಕ್ತಿಯೊಬ್ಬರು ಆನ್ಲೈನ್ ನಲ್ಲಿ ಬುಕ್ಕಿಂಗ್ನ ಮಾಹಿತಿ ಇಲ್ಲದೇ ಚಾರಣಕ್ಕೆ ಬಂದಿದ್ದು, ಈ ವೇಳೆ ಕಳಸ ಡಿಆರ್ಎಫ್ಒ ಚಂದನ್ಗೌಡ ಆನ್ಲೈನ್ ಟಿಕೆಟ್ ಮಾದರಿಯಲ್ಲಿ ನಕಲಿ ಟಿಕೆಟ್ ಸೃಷ್ಟಿಸಿ ಅದರ ಹಣವನ್ನು ಪೋನ್ ಪೇ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.

ಹೀಗೆ ಈ ಅಧಿಕಾರಿ 10ಕ್ಕೂ ಹೆಚ್ಚು ನಕಲಿ ಟಿಕೆಟ್ ಸೃಷ್ಟಿಸಿದ್ದ ಎನ್ನಲಾಗಿದ್ದು, ಆನ್ಲೈನ್ ಬುಕ್ಕಿಂಗ್ ಪಟ್ಟಿ ಹಾಗೂ ನೋಂದಣಿ ಪುಸ್ತಕದ ಪಟ್ಟಿಗೂ ತಾಳೆಯಾಗದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂಬಂಧ ತನಿಖೆ ನಡೆಸಿದಾದ ನಕಲಿ ಟಿಕೆಟ್ ಸೃಷ್ಟಿಸಿ ಸರಕಾರಕ್ಕೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಎಸಿಎಫ್ ಅವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಸಿಎಫ್ ಉಪೇಂದ್ರ ಪ್ರತಾಪ್ ಸಿಂಗ್ ಅವರು ಚಂದನ್ಗೌಡ ದ್ಯಾಮನಗೌಡರನ್ನು ಅಮಾನತು ಮಾಡಿ ಸೋಮವಾರ ಆದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News