ಮಲೆನಾಡಿನಲ್ಲಿ ಭಾರೀ ಮಳೆ | ಮೂಡಿಗೆರೆಯಲ್ಲಿ ಕಿರು ಸೇತುವೆ ಮುಳುಗಡೆ

Update: 2024-07-04 16:11 GMT

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭಾರೀ ಮಳೆಗೆ ಅಲಲ್ಲಿ ಅಪಾರ ಹಾನಿ ಸಂಭವಿಸಿದೆ. ಗ್ರಾಮಗಳ ಸಂಪರ್ಕ ಸೇತುವೆ ಮುಳುಗಡೆ, ತಡೆಗೋಡೆ ಕುಸಿತ, ಪಾರ್ಕಿಂಗ್ ಜಾಗಕ್ಕೆ ನೀರು ನುಗ್ಗಿರುವುದು, ರಸ್ತೆಗೆ ಮರ ಉರುಳಿ ವಾಹನ ಸಂಚಾರ ಬಂದ್ ಆದಂತಹ ಹಲವು ಘಟನೆಗಳು ವರದಿಯಾಗಿವೆ.

ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರೇ, ಬಯಲು ಭಾಗದಲ್ಲಿ ಮೋಡಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗುತ್ತಿದೆ. ಮಲೆನಾಡಿನ ಮಳೆ ಅಬ್ಬರಕ್ಕೆ ತುಂಗಾ, ಭದ್ರಾ, ಹೇಮಾವತಿ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ. ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಇಡೀ ಭಾರೀ ಮಳೆಯಾಗಿದ್ದು, ತುಂಗಾ ನದಿಯಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಿದ ಪರಿಣಾಮ ಗುರುವಾರ ಬೆಳಗ್ಗೆ ಶೃಂಗೇರಿ ಪಟ್ಟಣದ ಗಾಂಧಿ ಮೈದಾನಕ್ಕೆ ನದಿಯ ನೆರೆ ನುಗ್ಗಿ ವಾಹನ, ಜನಸಂಚಾರಕ್ಕೆ ತೊಂದರೆಯಾಗಿದ್ದಲ್ಲದೇ ಗಾಂಧಿ ಮೈದಾನದಲ್ಲಿದ್ದ ಕೆಲ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ತಾಲೂಕಿನಾದ್ಯಂತ ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ಆಗಾಗ್ಗೆ ಧಾರಾಕಾರ ಮಳೆಯಾದ ಪರಿಣಾಮ ವಾಹನ, ಜನಸಂಚಾರಕ್ಕೂ ತೊಂದರೆಯಾಗಿತ್ತು. ನದಿ, ಹಳ್ಳಕೊಳ್ಳಗಳು ತುಂಬಿ ಹರಿದ ಪರಿಣಾಮ ಅಕ್ಕಪಕ್ಕದ ಜಮೀನು, ಹೊಲ ಗದ್ದೆಗಳಿಗೆ ನೆರೆ ನೀರು ನುಗ್ಗಿದ ಘಟನೆಗಳೂ ವರದಿಯಾಗಿವೆ.

ಕಳಸ ತಾಲೂಕಿನಾದ್ಯಂತ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಭಾರೀ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ರಾತ್ರಿ ಸುರಿದ ಮಳೆಗೆ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದರಿಂದ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತ್ತು. ಗುರುವಾರ ಬೆಳಗ್ಗೆ 10 ಗಂಟೆ ಬಳಿಕ ಮಳೆ ಕೊಂಚ ಬಿಡುವು ನೀಡಿದ್ದರಿಂದ ನದಿಯಲ್ಲಿ ನೀರಿನ ಏರಿಕೆ ಕಡಿಮೆಯಾಗಿ ಸೇತುವೆ ಮೇಲೆ ಹರಿಯುತ್ತಿದ್ದ ನೀರು ಇಳಿದಿದೆ. ಕಳಸ ತಾಲೂಕಿನಾದ್ಯಂತ ಧಾರಾಕಾರ ಮಳೆ ಮುಂದುವರಿದಿದ್ದು, ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸೇತುವೆ ಬಳಿ ವಾಹನಗಳ ಸಂಚಾರ ನಿಯಂತ್ರಣಕ್ಕೆ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಕಾವಲು ಹಾಕಲಾಗಿದೆ. ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಇದಕ್ಕೆ ಸ್ಥಳೀಯರು, ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ತಡೆಗೋಡೆ ಕುಸಿದು ಗ್ರಾಪಂ ಉಪಾಧ್ಯಕ್ಷರ ಮನೆ, ವಾಹನಕ್ಕೆ ಹಾನಿ :

ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಕಳಸ ಪಟ್ಟಣ ಸಮೀಪದ ಕಚಗಾನೆ ಎಂಬಲ್ಲಿರುವ ಕಳಸ ಗ್ರಾಪಂ ಉಪಾಧ್ಯಕ್ಷ ರಂಗನಾಥ್ ಎಂಬವರ ಮನೆ ಎದುರಿನ ರಸ್ತೆಯಲ್ಲಿ ನಿರ್ಮಿಸಿದ್ದ ತಡೆಗೋಡೆಯೊಂದ ಕುಸಿದಿದೆ. ತಡೆಗೋಡೆ ಕುಸಿದು ರಂಗನಾಥ್ ಅವರ ಮನೆಯ ವಾಹನ ಹಾಗೂ ಕಟ್ಟಡಕ್ಕೆ ಹಾನಿಯಾಗಿದೆ.

 ಇನ್ನು ಮೂಡಿಗೆರೆ ತಾಲೂಕಿನಾದ್ಯಂತ ಬುಧವಾರ ಹಾಗೂ ಗುರುವಾರ ಧಾರಾಕಾರ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ಬಿಳ್ಳೂರು ಗ್ರಾಮದಲ್ಲಿರುವ ಕಿರು ಸಂಪರ್ಕ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಪರಿಣಾಮ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದ್ದು, ಘಾಟಿಯ ತಿರುವುಗಳಲ್ಲಿನ ತಡೆಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಹನಗಳಲ್ಲಿ ಬರುವ ಪ್ರಯಾಣಿಕರು, ಪ್ರವಾಸಿಗರು ತಡೆಗೋಡೆಗಳಲ್ಲಿನ ಬಿರುಕು ಕಂಡು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಉಳಿದಂತೆ ಜಿಲ್ಲೆಯ ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲೂ ಬುಧವಾರ ರಾತ್ರಿ ಹಾಗೂ ಗುರುವಾರ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಬುಧವಾರ, ಗುರುವಾರ ಸಾಧಾರಣ ಮಳೆಯಾಗಿದ್ದು, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಧಟ್ಟ ಮೋಡಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.

ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಕೆಲವೆಡೆ ತಡೆಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚಿಸಲಾಗಿದೆ. ಅಧಿಕಾರಿಗಳು ವರದಿ ಆಧರಿಸಿ ವಾಹನಗಳ ಸಂಚಾರ ನಿಷೇಧ ಮಾಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು.

ಡಾ.ವಿಕ್ರಮ್ ಅಮಟೆ, ಎಸ್ಪಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News