ಚಿಕ್ಕಮಗಳೂರಿನಲ್ಲಿ ಭಾರೀ ಹಿಂಗಾರು ಮಳೆ | ಮುಳ್ಳಯ್ಯನಗಿರಿ ವ್ಯಾಪ್ತಿಯಲ್ಲಿ ಪರದಾಡಿದ ಪ್ರವಾಸಿಗರು
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಹಿಂಗಾರು ಮಳೆ ಮತ್ತಷ್ಟು ಚುರುಕುಗೊಂಡಿದೆ. ಪಶ್ಚಿಮಘಟ್ಟ ಪ್ರದೇಶದ ಪ್ರಸಿದ್ಧ ಪ್ರವಾಸಿ ಕೇಂದ್ರ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಶನಿವಾರ ಸಂಜೆ, ರಾತ್ರಿ ಭಾರೀ ಮಳೆಯಾಗಿದ್ದು, ರಸ್ತೆ ಮೇಲೆ ಮಳೆಯ ನೀರು ಎರಡು ಅಡಿಗಳಷ್ಟು ಹರಿದಿದೆ. ಗಿರಿ ಪ್ರದೇಶದ ಇಳಿಜಾರು ಪ್ರದೇಶದಲ್ಲಿ ಮಳೆಯ ನೀರು ಜಲಪಾತದಂತೆ ಹರಿದಿದ್ದು, ಸುತ್ತಮುತ್ತಲ ಗ್ರಾಮಸ್ಥರು ಭೂಕುಸಿತದ ಆತಂಕಕ್ಕೆ ಒಳಗಾಗಿದ್ದಾರೆ.
ಶನಿವಾರ ಸಂಜೆಯಿಂದ ಇಡೀ ರಾತ್ರಿ ಮುಳ್ಳಯ್ಯನಗಿರಿ ಶ್ರೇಣಿ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಗಿರಿ ಪ್ರದೇಶಕ್ಕೆ ತೆರಳಿದ್ದ ಪ್ರವಾಸಿಗರು ಮಳೆಯಿಂದ ಪರದಾಡಿದರು. ಮುಳ್ಳಯ್ಯನಗಿರಿ ಶ್ರೇಣಿ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಹೇಳುತ್ತಿದ್ದಾರೆ.
ಭಾರೀ ಮಳೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಶನಿವಾರ ಸಂಜೆ ಹಾಗೂ ರಾತ್ರಿ ವೇಳೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದ್ದು, ತಾಲೂಕಿನ ಮುತ್ತೋಡಿ ವ್ಯಾಪ್ತಿಯ ಮಲಗಾರು ಗ್ರಾಮದಲ್ಲಿ ಹಾದು ಹೋಗುವ ಸೇತುವೆ ಮಳೆ ನೀರಿನಿಂದ ಜಾಲಾವೃತಗೊಂಡ ಪರಿಣಾಮ ಸಂಪರ್ಕ ಕಡಿತಗೊಂಡಿತ್ತು. ಹಳ್ಳದಾಟಲು ಗ್ರಾಮಸ್ಥರು ಪರದಾಡಿದರು. ವದ್ಧೆಯೊಬ್ಬರು ಸೇತುವೆ ದಾಟಲು ಪರದಾಡಿದ್ದು, ಈ ವೇಳೆ ಗ್ರಾಮಸ್ಥರು ವೃದ್ದೆಯನ್ನು ಹೊತ್ತು ಸೇತುವೆ ದಾಟಿಸಿದರು.
ಬಯಲುಸೀಮೆ ಪ್ರದೇಶದಲ್ಲೂ ಭಾರೀ ಪ್ರಮಾಣದ ಮಳೆಯಾಗಿದ್ದು, ತರೀಕೆರೆ ತಾಲೂಕಿನಾದ್ಯಂತ ಶನಿವಾರ ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದ ಹೊಲಗದ್ದೆ, ಅಡಿಕೆ ತೋಟಗಳಿಗೆ ಮಳೆಯ ನೀರು ನುಗ್ಗಿದೆ. ಸಣ್ಣಬೋಕಿಕೆರೆ, ಗೊಲ್ಲರಹಳ್ಳಿಗಳಲ್ಲಿ ಜಮೀನುಗಳು ಜಲಾವೃತಗೊಂಡಿದೆ. ಕೋರನಹಳ್ಳಿ, ಚಟ್ನಹಳ್ಳಿ, ಶಿವಪುರ ಭಾಗದಲ್ಲಿ ಭಾರೀ ಮಳೆಯಿಂದ ಹಳ್ಳ ಹರಿದು ಭಾರೀ ಅನಾಹುತ ಸೃಷ್ಟಿಸಿದೆ. ಗೊಲ್ಲರಹಳ್ಳಿಯಲ್ಲಿ ಜಮೀನಿನಲ್ಲಿ ಬೆಳೆದಿದ್ದ ಹೂವಿನ ತೋಟದಲ್ಲಿ ಮಳೆ ನೀರು ನಿಂತು ಹೂವು ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದೆ.
ತರೀಕೆರೆ, ಕಡೂರು, ಬೀರೂರು, ಅಜ್ಜಂಪುರ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಕ್ಕೆ ಮಳೆ ನೀರು ನುಗ್ಗಿದೆ. ಅಡಿಕೆ ತೋಟ ಸೇರಿದಂತೆ ತರಕಾರಿ, ರಾಗಿ, ಜೋಳ ಬೆಳೆದಿದ್ದ ಹೊಲ, ಗದ್ದೆಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟ ಉಂಟಾಗಿದೆ.
ಮಲೆನಾಡು ಪ್ರದೇಶದಲ್ಲೂ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಶನಿವಾರ ರಾತ್ರಿ ಜಿಲ್ಲಾದ್ಯಂತ ಸುರಿದ ಭಾರೀ ಮಳೆಯಿಂದ ಜನರು ಹೈರಾಣಾಗಿದ್ದಾರೆ. ರವಿವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಚಿಕ್ಕಮಗಳೂರು ನಗರ ಹಾಗೂ ಸುತ್ತಮುತ್ತ ರವಿವಾರ ಸಾಧಾರಣ ಮಳೆಯಾಗಿದ್ದರೆ, ಬಯಲು ಭಾಗದಲ್ಲೂ ರವಿವಾರ ಉತ್ತಮ ಮಳೆ ಸುರಿದಿದೆ.