ಚಿಕ್ಕಮಗಳೂರು | ದಿಢೀರ್ ಸುರಿದ ಮಳೆಗೆ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತ
ಚಿಕ್ಕಮಗಳೂರು : ಕಳೆದೊಂದು ತಿಂಗಳಿಂದ ಬಿಡುವು ನೀಡಿದ್ದ ಹಿಂಗಾರು ಮಳೆ ಗುರುವಾರ ಸಂಜೆ ಜಿಲ್ಲಾದ್ಯಂತ ದಿಢೀರ್ ಆರ್ಭಟಿಸಿದ್ದು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೇ, ಕಾಫಿ, ಅಡಿಕೆ ಕಟಾವು ಹಾಗೂ ಸಂಸ್ಕರಣೆಗೂ ತೊಂದರೆಯಾಗಿದೆ.
ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಆರ್ಭಟಿಸಿದ್ದ ಹಿಂಗಾರು ಮಳೆ ಅಕ್ಟೋಬರ್ ಕೊನೆವಾರ ಹಾಗೂ ನವೆಂಬರ್ ತಿಂಗಳಲ್ಲಿ ಸಂಪೂರ್ಣವಾಗಿ ಬಿಡುವು ನೀಡಿತ್ತು. ಮಳೆ ಬಿಡುವು ನೀಡಿದ್ದರಿಂದ ಬಯಲು ಭಾಗ ಹಾಗೂ ಮಲೆನಾಡು ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿತ್ತು. ಆದರೆ ಗುರುವಾರ ಬೆಳಗ್ಗಿನಿಂದ ಬಿಸಿಲಿನ ವಾತಾವರಣ ಇದ್ದ ಜಿಲ್ಲೆಯಲ್ಲಿ ಮಧ್ಯಾಹ್ನ ಆಗುತ್ತಿದ್ದಂತೆ ಮೋಡಕವಿದ ವಾತಾವರಣ ನಿರ್ಮಾಣವಾಗಿ ಮಳೆ ಸುರಿಯುವ ಮುನ್ಸೂಚನೆ ನೀಡಿತ್ತು. ಸಂಜೆಯಾಗುತ್ತಿದ್ದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿಢೀರ್ ಮಳೆ ಆರ್ಭಟಿಸಿದ್ದು, ಎಡಬಿಡದೇ ಸುರಿದ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನವೇ ಅಸ್ತವ್ಯಸ್ತಗೊಂಡಿತು.
ಮಲೆನಾಡು ಭಾಗದಲ್ಲಿ ಸಂಜೆ 4ರಿಂದ ಸುರಿದ ಮಳೆ ರಾತ್ರಿವರೆಗೂ ಸುರಿದಿದ್ದು, ಭಾರೀ ಮಳೆಯಿಂದಾಗಿ ಮಲೆನಾಡು ಭಾಗದ ಗ್ರಾಮೀಣ ಭಾಗದಲ್ಲಿ ರಸ್ತೆಯ ಮೇಲೆ ಮಳೆ ನೀರು ನಿಂತು ವಾಹಗಳ ಸಂಚಾರಕ್ಕೂ ತೊಂದರೆಯಾಗಿತ್ತು, ಜಿಲ್ಲೆಯ ಕಳಸ, ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳೂರು, ಸಂಸೆ, ಕುದುರೆಮುಖ, ಜಯಪುರ, ಕೊಪ್ಪ, ಶೃಂಗೇರಿ, ನೆಮ್ಮಾರು, ಕೆರೆಕಟ್ಟೆ, ಬಾಳೆಹೊನ್ನೂರು, ಮಾಗುಂಡಿ, ಎನ್.ಆರ್.ಪುರ ಭಾಗದಲ್ಲಿ ನಿರಂತರವಾಗಿ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು.
ಇನ್ನು ಜಿಲ್ಲೆಯ ಬಯಲು ಭಾಗದಲ್ಲೂ ಗುರುವಾರ ಸಂಜೆ 6ರಿಂದ ಕೆಲ ಹೊತ್ತು ಧಾರಾಕಾರ ಮಳೆಯಾಗಿದ್ದು, ಚಿಕ್ಕಮಗಳೂರು ನಗರದಲ್ಲಿ ಸುಮಾರು ಅರ್ಧಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದರೇ, ನಗರ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ ಭಾಗದಲ್ಲೂ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಮಳೆಯಿಂದಾಗಿ ಪ್ರವಾಸಕ್ಕೆ ಬಂದಿದ್ದವರು ಕೆಲ ಹೊತ್ತು ತೊಂದರೆ ಅನುಭವಿಸಿದರು.
ಸದ್ಯ ಮಲೆನಾಡು ಭಾಗದಲ್ಲಿ ಅರೇಬಿಕಾ ಕಾಫಿ ಹಾಗೂ ಅಡಿಕೆ ಕಟಾವು, ಸಂಸ್ಕರಣೆ ನಡೆಯುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಕಾಫಿ, ಅಡಿಕೆ ಕಟಾವು, ಸಂಸ್ಕರಣೆಗೆ ಅಡಚಣೆ ಉಂಟಾಗಿದೆ. ಮಲೆನಾಡು ಭಾಗದಲ್ಲಿ ಕಟಾವು ಮಾಡಿದ್ದ ಕಾಫಿ, ಅಡಿಕೆಯನ್ನು ಸಂಸ್ಕರಣೆ ಮಾಡಲು ಕಣದಲ್ಲಿ ಒಣಗಲು ಹಾಕಿದ್ದು, ದಿಢೀರ್ ಸುರಿದ ಮಳೆಯಿಂದಾಗಿ ಬೆಳೆಗಳು ಮಳೆ ನೀರಿನಲ್ಲಿ ತೊಯ್ದ ಪರಿಣಾಮ ಬೆಳೆನಷ್ಟಕ್ಕೂ ಮಳೆ ಕಾರಣವಾಗಿದೆ.
ಮಲೆನಾಡು ಭಾಗದಲ್ಲಿ ಭತ್ತ ಗದ್ದೆಗಳಲ್ಲಿ ಭತ್ತದ ತೆನೆ ಕಟ್ಟಿದ್ದು, ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಭತ್ತದ ತೆನೆಗಳಿಗೂ ಅಪಾರ ಹಾನಿಯನ್ನುಂಟು ಮಾಡಿದೆ. ಮಳೆ ಮುಂದುವರಿದಲ್ಲಿ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗಲಿದ್ದು ಅಪಾರ ಬೆಳೆನಷ್ಟಕ್ಕೂ ಮಳೆ ಕಾರಣವಾಗಲಿದೆ.