ಕೆಪಿಸಿಸಿ ಅಧ್ಯಕ್ಷರು ಆಸ್ತಿಗಾಗಿ ಬಾಲಕಿಯೊಬ್ಬಳನ್ನು ಕಿಡ್ನಾಪ್ ಮಾಡಿದ್ದರು : ಎಚ್.ಡಿ.ದೇವೇಗೌಡ ಆರೋಪ
ಚಿಕ್ಕಮಗಳೂರು: ಅಮೇರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕೆಪಿಸಿಸಿಯ ಅಧ್ಯಕ್ಷರೊಬ್ಬರು ಕಿಡ್ನಾಪ್ ಮಾಡಿದ್ದಲ್ದದೇ ಕಣ್ಣಿಗೆ ಬಟ್ಟೆಕಟ್ಟಿ ಬಚ್ಚಿಟ್ಟಿದ್ದರು, ನಂತರ ಬಾಲಕಿಯ ತಂದೆಯನ್ನು ಬೆದರಿಸಿ ಎಲ್ಲಾ ಆಸ್ತಿಯನ್ನು ಬರೆಸಿಕೊಂಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಪರ ಮತಯಾಚನೆ ಕಾರ್ಯಕ್ರಮಕ್ಕೂ ಮುನ್ನಾ ಸುದ್ದಿಗಾರರೊಂದಿಗರ ಜೊತೆ ಮಾತನಾಡಿದ ಅವರು, ಅಮೇರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯನ ಆಸ್ತಿಯನ್ನು ಕೆಪಿಸಿಸಿ ಅಧ್ಯಕ್ಷರೊಬ್ಬರು ಬರೆಸಿಕೊಂಡಿದ್ದರು. ಇದಕ್ಕೆ ನನ್ನ ಬಳಿ ದಾಖಲೆ ಇದೆ. ಬಿಡದಿ ಹತ್ತಿರ ರಸ್ತೆ ಪಕ್ಕದಲ್ಲಿ ಒಂದು ಐಟಿ ಕಂಪೆನಿ ಸ್ಥಾಪನೆ ಮಾಡಿದ್ದ ವ್ಯಕ್ತಿಯಿಂದ ಸುಳ್ಳು ಕ್ರಯಪತ್ರ ಸೃಷ್ಟಿಸಿದ್ದರು. ಈ ಪ್ರಕರಣ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗೆ ಹೋಗಿತ್ತು, ಅಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಭಾರೀ ಮುಖಭಂಗವಾಯಿತು. ಬಳಿಕ ಆಸ್ತಿಯ ಮಾಲಕನ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿ ಕಣ್ಣಿಗೆ ಬಟ್ಟೆ ಕಟ್ಟಿ ಬೇರೊಂದು ಮನೆಯಲ್ಲಿ ಇಡುತ್ತಾರೆ. ನಿನ್ನ ಮಗಳು ಬೇಕು ಎಂದರೇ ಸಹಿ ಮಾಡು ಎಂದು ಬೆದರಿಸುತ್ತಾರೆ. ಮಗುವಿನ ತಾಯಿ ಎಲ್ಲಾ ಬರೆದುಕೊಟ್ಟು ಮಗಳನ್ನು ಕರೆದುಕೊಂಡು ಬರುವಂತೆ ಗಂಡನ ಬಳಿ ಅಂಗಲಾಚುತ್ತಾರೆ ಎಂದು ಆರೋಪಿಸಿದರು.
ಇದನ್ನು ಎಲೆಕ್ಷನ್‍ನಲ್ಲಿ ಬಳಸಿಕೊಳ್ಳಿ ಎಂದು ಲಾಯರ್ ಒಬ್ಬರು ನನಗೆ ದಾಖಲೆ ತಂದುಕೊಟ್ಟರು. ನಾನು ಅನ್ಯಾಯಕ್ಕೊಳಗಾದ ವ್ಯಕ್ತಿಯ ಬಳಿ ಹೋದಾಗ ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಜೀವನಕ್ಕಾಗಿ ಬೇರೆಯವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮಾತನಾಡಿಸಿದಾಗ ಕರ್ನಾಟಕದ ಯಾರಿಗೂ ಮತ ಹಾಕಲ್ಲ. ನಾನು ಓಟರ್ ಲೀಸ್ಟ್ ನಲ್ಲಿಯೇ ಇಲ್ಲ. ಈ ಕರ್ನಾಟಕ ಸಾಕು ಎಂದರು. ಅವರ ಹೆಸರು ನನಗೆ ಮರೆತು ಹೋಗಿದೆ. ಇದು ನಡೆದು ಬಹಳ ವರ್ಷ ಆಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.