ಮೂಡಿಗೆರೆ ಬಿಜೆಪಿ ಮಂಡಲ ಅಧ್ಯಕ್ಷರ ಅಮಾನತು ಆದೇಶ ಹಿಂಪಡೆದ ಜಿಲ್ಲಾಧ್ಯಕ್ಷ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಮಂಡಲದ ಇಬ್ಬರು ಬಿಜೆಪಿ ಮುಖಂಡರನ್ನು ಪಕ್ಷದಿಂದ ಅಮಾನತು ಮಾಡಿದ್ದ ಆದೇಶವನ್ನು ಜಿಲ್ಲಾಧ್ಯಕ್ಷ ಹಿಂದಕ್ಕೆ ಪಡೆದಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಸೋಮವಾರು ಅಮಾನತು ಆದೇಶವನ್ನು ವಾಪಾಸ್ಸು ಪಡೆದಿದ್ದು, ಬಿಜೆಪಿ ಮೂಡಿಗೆರೆ ಮಂಡಲದ ಬಣಕಲ್ ಹೋಬಳಿ ಅಧ್ಯಕ್ಷ ಪಿ.ಜಿ.ಅನುಕುಮಾರ್ (ಪಟ್ಟದೂರು ಪುಟ್ಟಣ್ಣ) ಮತ್ತು ಗೋಣಿಬೀಡು ಹೋಬಳಿ ಅಧ್ಯಕ್ಷ ಭರತ್ ಕನ್ನೇಹಳ್ಳಿ ಇವರನ್ನು ಅಶಿಸ್ತಿನ ಕಾರಣಕ್ಕೆ ಇತ್ತೀಚೆಗೆ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದೀಗ ಈ ಅಮಾನತು ಆದೇಶವನ್ನು ಪಕ್ಷದ ಜಿಲ್ಲಾಧ್ಯಕ್ಷರು ಹಿಂದಕ್ಕೆ ಪಡೆದಿದ್ದಾರೆ.
ಮೂಡಿಗೆರೆ ಮಂಡಲ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಉಂಟಾದ ಗೊಂದಲ, ಪಕ್ಷದ ಅಧ್ಯಕ್ಷರನ್ನಾಗಿ ಗಜೇಂದ್ರ ಅವರನ್ನು ನೇಮಕ ಮಾಡಿದ ಸಂದರ್ಭದಲ್ಲಿ ಅಸಮಾಧಾನ ಸ್ಪೋಟಗೊಂಡಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನುಕುಮಾರ್ ಮತ್ತು ಭರತ್ ಅವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು. ಈ ಸಂಬಂಧ ನಡೆದ ಸಭೆಯೊಂದರಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್ ಅವರ ಮೇಲೆ ಅನುಕುಮಾರ್ ಮತ್ತು ಭರತ್ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಘಟನೆಯ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷರು ಅಶಿಸ್ತಿನ ಕಾರಣ ನೀಡಿ ಅನುಕುಮಾರ್ ಮತ್ತು ಭರತ್ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದರು. ಯಾವುದೇ ನೋಟೀಸ್ ನೀಡದೇ ಏಕಾಏಕಿ ಅಮಾನತು ಮಾಡಲಾಗಿದೆ ಎಂದು ಅಮಾನತುಗೊಂಡಿದ್ದ ಮುಖಂಡರು ಜಿಲ್ಲಾಧ್ಯಕ್ಷರ ವಿರುದ್ಧ ಹರಿಹಾಯ್ದಿದ್ದರು. ಮಾತ್ರವಲ್ಲ ಇವರ ಬೆಂಬಲಿಗರು ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಅಮಾನತು ಆದೇಶದ ಹಿನ್ನೆಲೆಯಲ್ಲಿ ಮಾ.15ರಂದು ಮೂಡಿಗೆರೆ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದ ದಿನವೇ ಅನುಕುಮಾರ್ ಮತ್ತು ಭರತ್ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿ ಸ್ವಾಭಿಮಾನಿ ಕಾರ್ಯಕರ್ತರ ಹೆಸರಿನಲ್ಲಿ ಪರ್ಯಾಯ ಸಮಾವೇಶ ಮಾಡಿದ್ದರು. ಈ ಸಮಾವೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಗೊಂದಲದಿಂದಾಗಿ ಅಂದು ನಿಗದಿಯಾಗಿದ್ದ ಪದಗ್ರಹಣ ಸಮಾರಂಭವನ್ನು ಮುಂದೂಡಲಾಗಿತ್ತು. ಗೊಂದಲ ನಿವಾರಣೆಗೆ ಮುಖಂಡರು ಆಸಕ್ತಿ ತೋರಿ ಮುಂದಿನ ದಿನಗಳಲ್ಲ ಒಟ್ಟಾಗಿ ಸೇರಿ ಪದಗ್ರಹಣ ಸಮಾರಂಭ ಏರ್ಪಡಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಪಕ್ಷದ ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಪರಸ್ಪರ ಮುನಿಸಿಕೊಂಡಿದ್ದ ಎರಡೂ ಗುಂಪಿನ ನಾಯಕರ ನಡುವೆ ರಾಜಿಸಂಧಾನ ನಡೆಸಿದ್ದಾರೆ ಎನ್ನಲಾಗಿದೆ. ಅದರ ಪರಿಣಾಮ ಇಂದು ಜಿಲ್ಲಾಧ್ಯಕ್ಷರು ಅಮಾನತು ಆದೇಶವನ್ನು ವಾಪಾಸ್ಸು ಪಡೆದಿದ್ದಾರೆ.