ಚಿಕ್ಕಮಗಳೂರು | ಬುದ್ಧ, ಅಂಬೇಡ್ಕರ್ ಪುತ್ಥಳಿ ತೆರವಿಗೆ ಮುಂದಾದ ಜಿಲ್ಲಾಡಳಿತ ; ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರಿಂದ ಪ್ರತಿಭಟನೆ

Update: 2024-04-13 17:30 GMT

ಚಿಕ್ಕಮಗಳೂರು : ತಾಲೂಕಿನ ಗವನಹಳ್ಳಿ ಸ.ನಂ.93ರಲ್ಲಿರುವ ಸರಕಾರಿ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ವತಿಯಿಂದ ನಿರ್ಮಿಸಿರುವ ಬುದ್ಧನ ವಿಗ್ರಹ ಹಾಗೂ ಅಂಬೇಡ್ಕರ್ ಅವರ ಪುತ್ಥಳಿಯನ್ನು ಜಿಲ್ಲಾಡಳಿತ ತೆರವಿಗೆ ಮುಂದಾಗಿದ್ದು, ಇದನ್ನು ವಿರೋಧಿಸಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ.ನಿಂಗಯ್ಯ ನೇತೃತ್ವದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ವರದಿಯಾಗಿದೆ.

ನಗರ ಸಮೀಪದ ಗವನಹಳ್ಳಿ ಗ್ರಾಮದ ಸ.ನಂ.93ರ 10 ಎಕರೆ ಸರಕಾರಿ ಜಾಗದಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಮುಂದಾಗಿದ್ದು, ಈ ಜಾಗದ ಮಂಜೂರಾತಿಗೆ ತಾಲೂಕು, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರಕಾರಕ್ಕೆ ಸಂಸ್ಥೆಯ ಮುಖಂಡರು ಮನವಿ ಸಲ್ಲಿಸಿದ್ದರು. ಜಿಲ್ಲಾಡಳಿತ ಹಾಗೂ ಸರಕಾರ ಜಾಗ ಮಂಜೂರಾತಿಗೆ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಈ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಮುಖಂಡರು ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಸದಸ್ಯರು ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಜಾಗವನ್ನು ಶೀಘ್ರ ಮಂಜೂರು ಮಾಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು. ಅಲ್ಲದೆ ಬುದ್ಧನ ಪ್ರತಿಮೆಯ ಸಮೀಪದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೂ ಚಾಲನೆ ನೀಡಿದ್ದರು.

ಶನಿವಾರ ತಹಶೀಲ್ದಾರ್ ಸುಮಂತ್ ಹಾಗೂ ಕಂದಾಯ ಉಪವಿಭಾಗಾಧಿಕಾರಿ ದಲ್ಜಿತ್‌ಕುಮಾರ್ ಅವರು ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಪ್ರತಿಮೆಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಪೊಲೀಸರ ಭದ್ರತೆಯಲ್ಲಿ ಪ್ರತಿಮೆಗಳನ್ನು ತೆರವು ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಇದನ್ನು ಖಂಡಿಸಿ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ಸಂಸ್ಥೆಯ ಮುಖಂಡರು ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಜಿಲ್ಲಾಡಳಿತ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಬಿ.ಬಿ.ನಿಂಗಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಇದಕ್ಕಾಗಿ ನಗರದ ಸಮೀಪದಲ್ಲಿ 10 ಎಕರೆ ಜಾಗವನ್ನು ಮಂಜೂರು ಮಾಡುವಂತೆ ತಾಲೂಕು, ಜಿಲ್ಲಾಡಳಿತ, ಕ್ಷೇತ್ರದ ಶಾಸಕರು ಹಾಗೂ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಜಿಲ್ಲಾಡಳಿತ, ನಗರ ಸಮೀಪದಲ್ಲಿ ಸರಕಾರಿ ಜಾಗದ ಲಭ್ಯವಿಲ್ಲವೆಂದು ಹೇಳಿ, ಸರಕಾರಿ ಜಾಗ ಗುರುತಿಸಿದಲ್ಲಿ ಮಂಜೂರು ಮಾಡುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಗರ ಸಮೀಪದ ಗವನಹಳ್ಳಿ ಗ್ರಾಮದ ಸ.ನಂ.93ರಲ್ಲಿ 10 ಎಕರೆ ಸರಕಾರಿ ಜಾಗ ಇರುವುದನ್ನು ಗುರುತಿಸಿ ಈ ಜಾಗವನ್ನು ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು ಎಂದರು.

ಆದರೆ, ಜಿಲ್ಲಾಡಳಿತ ಇದುವರೆಗೂ ಜಾಗ ಮಂಜೂರು ಮಾಡಲು ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ಜಾಗದಲ್ಲಿ ಬುದ್ಧನ ಪ್ರತಿಮೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ವತಿಯಿಂದ ಪ್ರತಿಷ್ಠಾಪಿಸಿದ್ದು, ಸದ್ಯ ಅಂಬೇಡ್ಕರ್ ಅವರ ಪ್ರತಿಮೆಯನ್ನೂ ನಿರ್ಮಿಸಲಾಗಿದೆ. ಆದರೆ, ಜಿಲ್ಲಾಡಳಿತ ಇದನ್ನು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದು, ಈ ಜಾಗ ವಿವಾದಿತ ಜಾಗವಾಗಿರುವುದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಮೆಗಳನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಅವಕಾಶವಿಲ್ಲ ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ ಎಂದು ಬಿ.ಬಿ.ನಿಂಗಯ್ಯ ತಿಳಿಸಿದರು.

ಈ ವೇಳೆ ಮುಖಂಡರಾದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಹಾಗೂ ದಲಿತ, ಪ್ರಗತಿಪರ ಸಂಘಟನೆಗಲ ಮುಖಂಡರಾದ ಎಂ.ಎಸ್.ಅನಂತ್. ವಕೀಲ ಪರಮೇಶ್ವರ್, ಮರ್ಲೆ ಅಣ್ಣಯ್ಯ, ಹಿರಿಯ ಪತ್ರಕರ್ತ ಚಂದ್ರಯ್ಯ, ದಂಟರಮಕ್ಕಿ ಶ್ರೀನಿವಾಸ್, ಹುಣಸೇಮಕ್ಕಿ ಲಕ್ಷ್ಮಣ್, ಕೆ.ಸಿ.ವಸಂತ್‌ಕುಮಾರ್, ಕೂದುವಳ್ಳಿ ಮಂಜುನಾಥ್, ರಮೇಶ್, ಮೂಡಿಗೆರೆ ಮಂಜುನಾಥ್, ಹರೀಶ್ ಮಿತ್ರ, ಕಠಾರದಳ್ಳಿ ಕುಮಾರ್ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News