ಚಿಕ್ಕಮಗಳೂರು: ರಾಮ ಮಂದಿರ ಉದ್ಘಾಟನೆ ದಿನ ಶಾಲೆಗೆ ರಜೆ ವಿಚಾರ; ನಗರದ ಖಾಸಗಿ ಶಾಲೆ ವಿರುದ್ಧ ಸಂಘಪರಿವಾರ ಆಕ್ರೋಶ

Update: 2024-01-20 17:15 GMT

 Photo: PTI

ಚಿಕ್ಕಮಗಳೂರು:  ರಾಮ ಮಂದಿರ ಉದ್ಘಾಟನೆ ದಿನ (ಜ.22)ದಂದು ಶಾಲೆಗೆ ರಜೆ ಹಾಕಿದರೆ ಒಂದು ಸಾವಿರ ರೂ.ದಂಡ ಹಾಕುವುದಾಗಿ ನಗರದ ಖಾಸಗಿ ಶಾಲೆಯೊಂದು ಮಕ್ಕಳಿಗೆ ಎಚ್ಚರಿಕೆ ನೀಡಿದೆ ಎಂದು ಆರೋಪಿಸಿ, ಶಾಲೆಯ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಶನಿವಾರ ವರದಿಯಾಗಿದೆ. 

ಅಯೋಧ್ಯೆಯಲ್ಲಿ ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ದಿನ ರಾಜ್ಯದ ಎಲ್ಲಾ ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಸರ್ಕಾರವೇ ಆದೇಶಿಸಿದೆ. ಜ.22ರಂದು ಶಾಲೆಗಳಿಗೆ ರಜೆ ನೀಡಬೇಕೋ, ಬೇಡವೋ ಎಂದು ಸರ್ಕಾರ ಕೂಡ ಗೊಂದಲದಲ್ಲಿದೆ‌. ಈ ಮಧ್ಯೆ ಖಾಸಗಿ ಶಾಲೆಗಳು ಮಕ್ಕಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಆರೋಪಿಸಿ ಸಂಘಪರಿವಾರ ಶಾಲೆ ವಿರುದ್ಧ ಆಕ್ರೋಶ ಹೊರಹಾಕಿದೆ.

ಜ.22ರಂದು ಯಾವುದೇ ಮಕ್ಕಳಿಗೆ ರಾಮ ಮಂದಿರದ ಲೈವ್ ನೋಡಬೇಕು ಅನ್ನಿಸಿದರೆ, ರಜೆ ಹಾಕಿ ಮನೆಯಲ್ಲೇ ನೋಡಿ. ಜಿಲ್ಲೆಯ ಯಾವುದೇ ಶಾಲೆಯ ಯಾವುದೇ ಮಕ್ಕಳಿಗೆ ಯಾರಾದರೂ ದಂಡ ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ಶಾಲೆಯ ಗೇಟ್ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಶಾಲೆಯಲ್ಲಿ ನವೋದಯ ಪ್ರವೇಶ ಪರೀಕ್ಷೆ ನಡೆಯುತ್ತಿದ್ದರಿಂದ ಸ್ಥಳಕ್ಕಾಗಮಿಸಿದ ಎಎಸ್ಪಿ ಕೃಷ್ಣಮೂರ್ತಿ ಪರೀಕ್ಷೆಗೆ ತೊಂದರೆ ಮಾಡಬೇಡಿ, ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿದ ನಂತರ ಸಂಘ ಪರಿವಾರ ಸಂಘಟನೆ ಕಾರ್ಯಕರ್ತರು ಅಲ್ಲಿಂದ ತೆರಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಪ್ರಕಾಶ್ ಶಾಲೆಗೆ ಭೇಟಿ ನೀಡಿ ಮುಖ್ಯಶಿಕ್ಷಕಿ ಅವರೊಂದಿಗೆ ಚರ್ಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಮುಖ್ಯ ಶಿಕ್ಷಕಿಯೊಂದಿಗೆ ಚರ್ಚಿಸಿದ್ದೇನೆ. ಶುಕ್ರವಾರವೂ ಶಾಲೆಗೆ ರಜೆ ನೀಡಲಾಗಿತ್ತು. ಶನಿವಾವೂ ನವೋದಯ ಪ್ರವೇಶ ಪರೀಕ್ಷೆ ನಡೆಯುತ್ತಿರುವುದರಿಂದ ರಜೆ ನೀಡಲಾಗಿದೆ. ಭಾನುವಾರ ರಜೆ ಇದೆ. ಸೋಮವಾರ ಮಕ್ಕಳು ಶಾಲೆಗೆ ಬರುವುದಿಲ್ಲವೆಂಬ ಕಾರಣಕ್ಕೆ ಕಡ್ಡಾಯವಾಗಿ ಮಕ್ಕಳು ಶಾಲೆಗೆ ಬರಬೇಕು ಎಂದು ಹೇಳಿದ್ದಾರೆ. ರಾಮಮಂದಿರ ಉದ್ಘಾಟನೆಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾದರೇ ದಂಡ ವಿಧಿಸುವಂತಿಲ್ಲ. ಸೋಮವಾರ ರಜೆ ಹಾಕುವ ವಿದ್ಯಾರ್ಥಿಗಳು ರಜೆ ಹಾಕಬಹುದೆಂದು ವಿದ್ಯಾರ್ಥಿಗಳ ಪೋಷಕರಿಗೆ ಮುಖ್ಯ ಶಿಕ್ಷಕಿ ಸಂದೇಶವನ್ನೂ ರವಾನಿಸಿದ್ದಾರೆ ಎಂದು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕಿ  ಮಾತನಾಡಿ, ಶಾಲೆಗೆ ನಿರಂತರವಾಗಿ ರಜೆ ಇದ್ದ ವೇಳೆ ಮಕ್ಕಳನ್ನು ಕರೆದು ಕಡ್ಡಾಯವಾಗಿ ಶಾಲೆಗೆ ಬರುವಂತೆ ಸೂಚನೆ ನೀಡುತ್ತೇನೆ. ನಿರಂತರ ರಜೆಯಿಂದ ಸಕಾಲದಲ್ಲಿ ಶಾಲೆಗೆ ಬರಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳು ಪಾಠ ಪ್ರವಚನಗಳಿಂದ ವಂಚಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಿಮೈಂಡ್ ಮಾಡುತ್ತೇನೆ. ಇದೇ ಆ ರೀತಿಯ ರಿಮೈಂಡರ್ ಅನ್ನೂ ಮಕ್ಕಳಿಗೆ ಕೊಟ್ಟಿದ್ದೇನೆಯೇ ವಿನಃ ಯಾವುದೇ ಕಾರಣಕ್ಕೂ ನಾನು ನೀಡಿದ ರಿಮೈಂಡರ್ ಗೂ ರಾಮಂದಿರ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಕೂಡ ಧಾರ್ಮಿಕ ವ್ಯಕ್ತಿಯಾಗಿದ್ದು, ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಎಲ್ಲಾ ಮಕ್ಕಳನ್ನು ಸಮಾನ ರೀತಿಯಲ್ಲಿ ನೋಡುತ್ತೇನೆ. ಜ.22ರಂದು ಶಾಲೆಗೆ ಬರದಿದ್ದರೇ ದಂಡ ಹಾಕುತ್ತೇನೆಂದು ಹೇಳಿಲ್ಲ. ಸಹಜವಾಗಿ ಪ್ರತೀ ಸಾರಿ ಹೇಳುವಂತೆ ರಜೆ ಹಾಕದೇ ಕಡ್ಡಾಯವಾಗಿ ಬನ್ನಿ ಎಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News