ಮೂಡಿಗೆರೆ | ಕಾಡುಕೋಣ ದಾಳಿ : ಇಬ್ಬರು ಕಾರ್ಮಿಕರಿಗೆ ಗಾಯ

Update: 2024-05-08 13:13 GMT

ಫೈಲ್ ಫೋಟೋ 

ಮೂಡಿಗೆರೆ : ಸೌದೆ ತರಲು ತೆರಳಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಮುದ್ರೆಮನೆ ಸಮೀಪದ ರಸ್ತೆಯಲ್ಲಿ ಬುಧವಾರ ನಡೆದಿರುವುದಾಗಿ ವರದಿಯಾಗಿದೆ.

ತಾಲೂಕಿನ ಹೊಯ್ಸಳಲು ಗ್ರಾಮದ ಸುಮಾರು 6 ಮಂದಿ ಕೂಲಿ ಕಾರ್ಮಿಕರು ಮುದ್ರೆಮನೆ ಸಮೀಪದ ಗಿರಿಜಾ ರಮೇಶ್ ಎಂಬವರ ತೋಟದಿಂದ ಸೌದೆ ತರಲೆಂದು ಬುಧವಾರ ಬೆಳಗ್ಗೆ  ವಾಹನದಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ರಸ್ತೆ ತಿರುವಿನಲ್ಲಿ ಕಾಡುಕೋಣ ದಿಢೀರ್ ಎಂಬಂತೆ ಪ್ರತ್ಯಕ್ಷವಾಗಿದೆ. ಕಾಡು ಕೋಣ ಸ್ಥಳದಿಂದ ತೆರಳಿದ ಬಳಿಕ ಮುಂದೆ ಸಾಗಲೆಂದು ಚಾಲಕ ವಾಹನವನ್ನು ದೂರದಲ್ಲಿಯೇ ನಿಲ್ಲಿಸಿದ್ದಾರೆ ಎನ್ನಲಾಗಿದೆ.

ಆದರೆ, ನೋಡನೂಡುತ್ತಿದ್ದಂತೆ ಕಾಡುಕೋಣ ಹತ್ತಿರ ಬಂದು ವಾಹನದ ಮೇಲೆ ದಾಳಿ ನಡೆಸಿದೆ. ಜತೆಗೆ ವಾಹನದ ಬಾಗಿಲಿಗೆ ಗುದ್ದಲಾರಂಭಿಸಿದೆ. ಭಯದಿಂದ ವಾಹನದಲ್ಲಿದ್ದವರೆಲ್ಲಾ ತಪ್ಪಿಸಿಕೊಂಡು ಓಡಿದ್ದಾರೆ. ಕೂಲಿ ಕಾರ್ಮಿಕರಾದ ದಿನೇಶ್ ಹಾಗೂ ಜಗದೀಶ್ ವಾಹನದಿಂದ ಹೊರಗೆ ಬಿದ್ದಾಗ ಅವರ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಇವರಿಬ್ಬರೂ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ತೋಟ ಹಾಗೂ ಗ್ರಾಮೀಣ ಪ್ರದೇಶದ ಜನರು ಭಯದಿಂದಲೇ ತಿರುಗಾಡುವ ಪರಿಸ್ಥಿತಿ ಉಂಟಾಗಿದೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮವಹಿಸಬೇಕು. ಅಲ್ಲದೇ ಗಾಯಳುಗಳಿಗೆ ಸೂಕ್ತ ಪರಿಹಾರ ನಿಡಬೇಕೆಂದು ಸುಂದ್ರೇಶ್ ಹೊಯ್ಸಳಲು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News