ಮೈಸೂರಿನ ಚಿದಾನಂದ ಎಸ್‌ ನಾಯ್ಕ್‌ ಅವರ ಸಿನಿಮಾಗೆ ಕಾನ್ ಲಾ ಸಿನೆಫ್‌ ಪ್ರ‌ಶಸ್ತಿ

Update: 2024-05-24 07:05 GMT

Image Credit: Instagram.com/chidananda_s_naik

ಕಾನ್ : ಇಲ್ಲಿ ನಡೆಯುತ್ತಿರುವ 77ನೇ ಕಾನ್ ಚಲನಚಿತ್ರೋತ್ಸವದಲ್ಲಿ ಭಾರತಕ್ಕೆ ಪ್ರಶಸ್ತಿಯ ಗರಿ ದೊರಕಿದೆ. ಮೈಸೂರಿನ ವೈದ್ಯ, ಚಿತ್ರ ನಿರ್ಮಾಪಕ ಚಿದಾನಂದ ಎಸ್‌ ನಾಯ್ಕ್‌ ಅವರ “ಸನ್‌ಫ್ಲವರ್‌ ವೇರ್‌ ದಿ ಫಸ್ಟ್‌ ಒನ್ಸ್‌ ಟು ನೋ…” ಚಿತ್ರಕ್ಕೆ ಲಾ ಸಿನೆಫ್‌ ವಿಭಾಗದಲ್ಲಿ ಪ್ರಥಮ ಸ್ಥಾನ ಲಭಿಸಿದೆ.

ಪುಣೆಯ ಫಿಲ್ಮ್‌ ಎಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದಲ್ಲಿ ತಮ್ಮ ಒಂದು ವರ್ಷದ ಕೋರ್ಸ್‌ ಪೂರ್ಣಗೊಳ್ಳುವ ಹಂತದಲ್ಲಿ ಅವರು ಈ ಸಿನೆಮಾ ತಯಾರಿಸಿದ್ದರು.

‘ಸನ್‌ಫ್ಲವರ್‌ ವೇರ್‌ ದಿ ಫಸ್ಟ್‌ ಒನ್ಸ್‌ ಟು ನೋ’ ಸಾಕ್ಷಚಿತ್ರವು ಕನ್ನಡ ಜಾನಪದ ಮೂಲವಾಗಿದ್ದು, ಹುಂಜವನ್ನು ಕದಿಯುವ ಒಬ್ಬ ಅಜ್ಜಿಯ ಕಥೆ ಇದರ ಮೂಲ ಸಾರಾಂಶವಾಗಿದೆ.

ಲಾ ಸಿನೆಫ್‌ ವಿಭಾಗದ ಮೂರನೇ ಪ್ರಶಸ್ತಿ ಭಾರತೀಯ ಮೂಲದ ಮಾನ್ಸಿ ಮಹೇಶ್ವರಿ ಅವರ ಅನಿಮೇಶನ್‌ ಚಿತ್ರ “ಬನ್ನಿಹುಡ್‌”ಗೆ ಲಭಿಸಿದೆ.

ಮಹೇಶ್ವರಿ ಅವರು ಮೀರತ್‌ ಮೂಲದವರಾಗಿದ್ದು ದಿಲ್ಲಿಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಲ್ಮ್‌ ಟೆಕ್ನಾಲಜಿಯ ಹಳೆ ವಿದ್ಯಾರ್ಥಿನಿಯಾಗಿದ್ದಾರೆ. ಆಕೆ ಬನ್ನಿಹುಡ್‌ ಅನ್ನು ಇಂಗ್ಲೆಂಡ್‌ನ ನ್ಯಾಷನಲ್‌ ಫಿಲ್ಮ್‌ ಎಂಡ್‌ ಟೆಲಿವಿಷನ್‌ ಸ್ಕೂಲ್‌ನಲ್ಲಿ ಕಲಿಯುತ್ತಿರುವಾಗ ತಯಾರಿಸಿದ್ದರು.

ಈ ವಿಭಾಗದ ಎರಡನೇ ಪ್ರಶಸ್ತಿಯನ್ನು ಕೊಲಂಬಿಯಾ ವಿವಿಯ ಅಸ್ಯಾ ಸೆಗಲೊವಿಚ್‌ ಅವರ “ಔಟ್‌ ಆಫ್‌ ದಿ ವಿಡೋ ಥ್ರೂ ದಿ ವಾಲ್” ಮತ್ತು ಗ್ರೀಸ್‌ನ ಅರಿಸ್ಟಾಟಲ್‌ ವಿವಿಯ ನಿಕೊಸ್‌ ಕೊಲಿಯುಕೊಸ್‌ ಅವರ “ದಿ ಖೆಯೋಸ್‌ ಶಿ ಲೆಫ್ಟ್‌ ಬಿಹೈಂಡ್”‌ ಚಲನಚಿತ್ರಗಳು ಹಂಚಿಕೊಂಡಿವೆ.

ಪ್ರಶಸ್ತಿ ವಿಜೇತ ಸಿನಿಮಾಗಳನ್ನು ಜೂನ್‌ 3ರಂದು ಸಿನೆಮಾ ಡು ಪಾಂಥಿಯನ್‌ ಮತ್ತು ಜೂನ್‌ 4ರಂದು ಎಂಕೆ2 ಖ್ವುಯಾ ಡೆ ಸೀನ್‌ನಲ್ಲಿ ಪ್ರದರ್ಶಿಸಲಾಗುವುದು.

ಈ ಹಿಂದೆ 2020ರಲ್ಲಿ ತಮ್ಮ “ಕ್ಯಾಟ್‌ಡಾಗ್‌” ಸಿನಿಮಾಕ್ಕಾಗಿ ಎಫ್‌ಟಿಐಐ ವಿದ್ಯಾರ್ಥಿನಿ ಅಶ್ಮಿತಾ ಗುಹಾ ನಿಯೋಗಿ ಕಾನ್ ನಲ್ಲಿ ಪ್ರಶಸ್ತಿ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News