ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ: ಸಿ ಟಿ ರವಿ ಆರೋಪ

Update: 2024-12-20 03:52 GMT

ಬೆಂಗಳೂರು: 'ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದ್ದು,  ನನಗಾಗುವ ಎಲ್ಲ ತೊಂದರೆಗೆ ಪೊಲೀಸ್ ಇಲಾಖೆ ಮತ್ತು ಕಾಂಗ್ರೆಸ್ ಸರ್ಕಾರವೇ ಹೊಣೆ' ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ  ಜಾಲತಾಣ Xನಲ್ಲಿ ವಿಡಿಯೊ ಸಹಿತ ಪೋಸ್ಟ್ ಹಂಚಿಕೊಂಡಿರುವ ಅವರು, 'ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ನನ್ನನ್ನು ಕೂರಿಸಿಕೊಂಡು ಸುತ್ತಾಡಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

'ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್‌ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೆಸ್ ಸರ್ಕಾರವೇ ಕಾರಣ' ಎಂದು ಹೇಳಿದ್ದಾರೆ.

 'ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು ಯಾಕೆ? ನನ್ನನ್ನು ಕೊಲೆ ಮಾಡುವುದೇ ನಿಮ್ಮ ಉದ್ದೇಶ. ಇಲ್ಲಂದ್ರೆ ಯಾಕೆ ಸುತ್ತಾಡಿಸಿಕೊಂಡು ಬಂದಿದ್ದೀರಾ' ಎಂದು ಅವರು ಪ್ರಶ್ನಿಸಿದ್ದಾರೆ.

ಪೊಲೀಸರು ನನ್ನನ್ನು ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಖಾನಾಪುರ ಠಾಣೆಗೆ ಕರೆತಂದರು. ನನ್ನ ಮೇಲೆ ಯಾವ ಪ್ರಕರಣ ದಾಖಲಾಗಿದೆ  ಎಂದೂ ಅವರು ಹೇಳಲಿಲ್ಲ.  ಶೂನ್ಯ ಎಫ್‌ಐಆರ್‌ ದಾಖಲಿಸುವಂತೆ ನಾನು ಕೊಟ್ಟ ದೂರನ್ನೂ ದಾಖಲಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ 3 ಗಂಟೆ ಕಳೆದಿದೆ. ನನ್ನನ್ನು ಅಪರಾಧಿಯಂತೆ ನಡೆಸಿಕೊಳ್ಳಲಾಗುತ್ತಿದೆ. ನನಗೆ ಏನು ಬೇಕು ಅಂತಲೂ ಕೇಳಿಲ್ಲ. ನನ್ನನ್ನು ಪೊಲೀಸ್ ಠಾಣೆಗೆ ಏಕೆ ಕರೆತಂದಿದ್ದಾರೆ ಎಂದೂ ಹೇಳಿಲ್ಲ. ನನ್ನ  ಜೀವಕ್ಕೆ ಅಪಾಯವಿದ್ದು, ಏನಾದರೂ ಸಂಭವಿಸಿದರೆ ಪೊಲೀಸರು ಹಾಗೂ ಡಿಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ತಂಡವೇ ನೇರ ಹೊಣೆಯಾಗುತ್ತೆ ಎಂದು ಹೇಳಿದ್ದಾರೆ.

Full View

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಲ್ಲೇಖಿಸಿ ಮಾನಹಾನಿ ಪದಬಳಕೆ ಆರೋಪದಡಿ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೇ ಇಲ್ಲಿನ ಹಿರೇಬಾಗೇವಾಡಿ ಠಾಣಾ ಪೊಲೀಸರು ಬಂಧಿಸಿದ್ದರು.  

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News