ಬಂಟ್ವಾಳ| ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಅಸ್ಮಾಗೆ ʼಸಮನ್ವಯ ಶಿಕ್ಷಕ ಪ್ರಶಸ್ತಿ-2024ʼ

Update: 2024-11-13 14:52 GMT

ಬಂಟ್ವಾಳ: ಸಮನ್ವಯ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಕೊಡಮಾಡುವ ʼಸಮನ್ವಯ ಶಿಕ್ಷಕ ಪ್ರಶಸ್ತಿ - 2024ʼ ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಅಸ್ಮಾ ಗಡಿಯಾರ ಆಯ್ಕೆಯಾಗಿರುತ್ತಾರೆ ಎಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಗಡಿಯಾರ ಎಂಬ ಊರಿನಲ್ಲಿ ಪಿ.ಕೆ. ಅಬ್ಬು ಮತ್ತು ಸಾರಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ಅಸ್ಮ ಬಾಲ್ಯದಿಂದಲೇ ಶಿಕ್ಷಣದ ಬಗ್ಗೆ ಅಪಾರ ಒಲವು, ಆಸಕ್ತಿ ಹೊಂದಿದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಡಿಯಾರದಲ್ಲಿ ಪ್ರಾಥಮಿಕ ಶಿಕ್ಷಣ, ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ ಪ್ರೌಢಶಿಕ್ಷಣ, ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು.

ಅಸ್ಮಾ ಅವರು ಪಿಯುಸಿ ಶಿಕ್ಷಣದ ಬಳಿಕ ಸ್ಥಳೀಯ ವಿಸ್ಡಂ ಆಂಗ್ಲಮಾಧ್ಯಮ ಶಾಲೆಯಲ್ಲಿ 2009ರಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಆರಂಭಿಸಿದರು. ಉನ್ನತ ವಿದ್ಯಾಭ್ಯಾಸ ಪಡೆಯುವ ಆಕಾಂಕ್ಷೆ ಹೊಂದಿದ್ದ ಅಸ್ಮಾ ಅವರು ಸೇವಾ ನಿರತರಾಗಿದ್ದಾಗ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪೂರ್ಣಗೊಳಿಸಿದರು. 2011ರಲ್ಲಿ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಗೆ ಸಹಶಿಕ್ಷಕಿಯಾಗಿ ಸೇವೆಗೆ ಸೇರಿದ ಅವರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದರು.

ಬೋಧನೆ ಮತ್ತು ಸ್ವಯಂ ಕಲಿಕೆಯನ್ನು ಜೊತೆ ಜೊತೆಯಾಗಿ ಆಸ್ವಾದಿಸುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ತನ್ನನ್ನು ತಾನು ಸಮರ್ಪಣಾ ಭಾವದಿಂದ ಅರ್ಪಿಸಿಕೊಂಡ ಅಸ್ಮಾ ಅವರು ಬಿಡುವಿನ ಅವಧಿಯಲ್ಲಿ ಕಂಪ್ಯೂಟರ್ ಕಲಿಕೆಯಲ್ಲಿ ಪಿ.ಜಿ.ಡಿ.ಸಿ.ಎ ಕೋರ್ಸನ್ನು ಪೂರ್ಣಗೊಳಿಸಿದರು. ಅಲ್ ಬಿರ್ರ್ ಶಾಲಾಡಳಿತ ಮಂಡಳಿ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉಭಯ ರಾಜ್ಯಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್ ಗಳಿಸಿದ್ದಾರೆ.

ಕಳೆದ ಹದಿಮೂರು ವರ್ಷಗಳಲ್ಲಿ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಸಹಶಿಕ್ಷಕಿ, ಸಹಾಯಕ ಮುಖ್ಯ ಶಿಕ್ಷಕಿ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆಯಾಗಿ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿರುವ ಅಸ್ಮಾ ಅವರು 2024ನೇ ಸಾಲಿನಲ್ಲಿ ಬಿ.ಎಡ್ ಪದವಿಯನ್ನೂ ಪಡೆದರು.

ಸೇವೆಯಲ್ಲಿ ದಕ್ಷತೆ, ಪ್ರಾಮಾಣಿಕತೆ, ಬದ್ಧತೆಗೆ ಪರ್ಯಾಯ ಹೆಸರಿನಂತೆ ಕಾರ್ಯನಿರ್ವಹಿಸುತ್ತಾ ಬಂದಿರುವ ಅಸ್ಮಾ ಅವರು ತನ್ನ ಶಾಲೆಯ ವಿದ್ಯಾರ್ಥಿಗಳನ್ನು ಬಹುತೇಕ ಎಲ್ಲಾ ಸ್ಪರ್ಧೆಗಳಿಗೆ ಅಣಿಯಾಗಿಸಿದವರು. ಶಿಕ್ಷಣ ಇಲಾಖೆ ಅಥವಾ ಇತರೆ ಸಂಘಸಂಸ್ಥೆಗಳು ಏರ್ಪಡಿಸುವ ವಿದ್ಯಾರ್ಥಿಗಳಿಗಾಗಿನ ಪಠ್ಯ- ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಾ ಬಂದಿರುವ ಅಸ್ಮಾ ಅವರು ತನ್ನ ಸಮಯದ ಬಹುಪಾಲನ್ನು ತನ್ನ ಸಂಸ್ಥೆ ಮತ್ತು ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟ ಆದರ್ಶ ಶಿಕ್ಷಕಿಯಾಗಿದ್ದಾರೆ. ಅವರ ನಿರಂತರ ಸೇವೆ, ಸೇವಾನಿರತ ಕಲಿಕೆ, ಸಮರ್ಪಣಾ ಭಾವದ ಕರ್ತವ್ಯ, ಒಂದು ಶಿಕ್ಷಣ ಸಂಸ್ಥೆಗಾಗಿ ತೋರಿದ ನಿಷ್ಠೆ, ವಿದ್ಯೆಯ ದಾಹವನ್ನು ಪರಿಗಣಿಸಿ ಸಮನ್ವಯ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಅಂಗವಾಗಿ ಕೊಡಮಾಡುವ ಎರಡನೇ ವರ್ಷದ ಸಮನ್ವಯ ಶಿಕ್ಷಕ ಪ್ರಶಸ್ತಿ- 2024 ನ್ನು ಅಸ್ಮಾ ಅವರಿಗೆ ನ.17ರಂದು ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News