ಅತ್ರಾಡಿ ಖಾಝಿ ಅಲ್ ಹಾಜ್ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ ನಿಧನ

Update: 2024-06-30 08:38 GMT

ಮೂಡುಬಿದಿರೆ: ಅತ್ರಾಡಿ, ವಾಲ್ಪಾಡಿ, ಕಾಶಿಪಟ್ಣ ಖಾಝಿಯಾಗಿದ್ದ ಖ್ಯಾತ ವಾಗ್ಮಿ ಅಲ್ ಹಾಜ್ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ (80) ಅವರು ರವಿವಾರ ಬೆಳಿಗ್ಗೆ ನಿಧನರಾದರು.

ಅತ್ರಾಡಿ ಖಾಝಿ ಎಂದೇ ಗುರುತಿಸಲ್ಪಟ್ಟಿರುವ ಅಲ್‌ಹಾಜ್ ವಿ.ಕೆ ಅಬೂಬಕರ್ ಮುಸ್ಲಿಯಾರ್ ಅವರು ಉಡುಪಿ, ದ.ಕ ಜಿಲ್ಲೆಗಳಲ್ಲಿ ಧಾರ್ಮಿಕ ಮತ ಪ್ರವಚನದಿಂದ ಖ್ಯಾತರಾಗಿದ್ದರು.

ಮೂಲತಃ ನಗರ ಹೊರವಲಯದ ಅಡ್ಯಾರ್ ಕಣ್ಣೂರಿನವರಾದ ಇವರು, ಪ್ರಸ್ತುತ ಕಾಸರಗೋಡು ಜಿಲ್ಲೆಯ ಬಂದ್ಯೋಡು ಅಡ್ಕ ಎಂಬಲ್ಲಿ ನೆಲೆಸಿದ್ದರು. ಮೂಡುಬಿದಿರೆ ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ್ದ ಇವರು ಕೆಲ ಕಾಲದ ಅನಾರೋಗ್ಯದಿಂದಾಗಿ ಮನೆಯಲ್ಲೇ ಇದ್ದರು.

 ಅಡ್ಯಾರ್ ಕಣ್ಣೂರಿನ ಮುಹಮ್ಮದ್ ಹಾಜಿ-ಸಾರಮ್ಮ ದಂಪತಿಯ ಪುತ್ರನಾಗಿ 1944ರ ಜುಲೈ 27ರಂದು ಅಡ್ಯಾರ್ ಕಣ್ಣೂರಿನಲ್ಲಿ ಜನಿಸಿದ್ದ ಅಬೂಬಕರ್ ಮುಸ್ಲಿಯಾರ್ ಅಡ್ಯಾರ್ ಕಣ್ಣೂರಿನಲ್ಲೇ ತನ್ನ ಪ್ರಾಥಮಿಕ ಶಿಕ್ಷಣ ಕಲಿತರು. ಬಳಿಕ ಉಳ್ಳಾಲ ತಂಙಳ್‌ರ ಬಳಿ ಕಲಿತ ಅವರು ಉತ್ತರಪ್ರದೇಶದ ದೇವ್‌ಬಂದ್‌ನಲ್ಲಿ ಎಂಎಫ್‌ಬಿ ಪದವಿ ಪಡೆದರು. ನಂತರ ವಳವೂರು, ಸುಳ್ಯದ ಮೊಗರ್ಪಣೆ, ಪೆರಿಂಗಾಡಿ, ಬಂದ್ಯೋಡ್‌ನಲ್ಲಿ ಖತೀಬ್ ಮತ್ತು ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು.

ತದನಂತರ ಅತ್ರಾಡಿಯನ್ನು ಕೇಂದ್ರವಾಗಿಟ್ಟುಕೊಂಡು ಆಸುಪಾಸಿನ ಹಲವು ಜಮಾಅತ್‌ಗಳ ಖಾಝಿಯಾಗಿ ನಿಯುಕ್ತಿಗೊಂಡರು. ಸುಮಾರು 20 ವರ್ಷಗಳಿಂದ ಅವರು ಖಾಝಿಯಾಗಿ ಸೇವೆ ಸಲ್ಲಿಸಿದ್ದರು. ದ.ಕ.ಜಿಲ್ಲಾ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಕಳೆದ 20 ವರ್ಷಗಳಿಂದ ಕಾಸರಗೋಡಿನಲ್ಲಿ ನೆಲೆಸಿದ್ದ ಅತ್ರಾಡಿ ಖಾಝಿ ಬ್ಯಾರಿ, ತುಳು, ಕನ್ನಡ, ಮಲಯಾಳಂ, ಹಿಂದಿ, ಅರಬಿ, ಉರ್ದು, ಮರಾಠಿ, ಇಂಗ್ಲಿಷ್ ಭಾಷೆಯನ್ನು ಬಲ್ಲವರಾಗಿದ್ದರು.

ಮೃತರು ಪತ್ನಿ, ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಸಹಿತ  ಸಹಿತ ನೂರಾರು ಶಿಷ್ಯಂದಿರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಬಂದ್ಯೋಡು ಅಡ್ಕ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿರಿಯ ವಿದ್ವಾಂಸರಾದ  ಖಾಝಿ ಅಲ್ಹಾಜ್ ವಿ.ಕೆ ಅಬೂಬಕರ್ ಮುಸ್ಲಿಯಾರ್ ಮೂಡುಬಿದಿರೆ ಅವರ ನಿಧನಕ್ಕೆ ಸುನ್ನೀ ಸಂಘಟನೆಗಳು ಸಂತಾಪ ಸೂಚಿಸಿವೆ. ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಮೃತರ ಅಂತಿಮ ದರ್ಶನ ಪಡೆದರು.

ಕಾಶಿಪಟ್ನ, ವಾಲ್ಪಾಡಿ, ನಿಟ್ಟೆ, ಆತ್ರಾಡಿ ಮುಂತಾದ ಮೊಹಲ್ಲಾಗಳ ಖಾಝಿ ಅಬೂಬಕರ್ ಹಾಜಿಯವರ ನಿಧನಕ್ಕೆ ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಪ್ರಧಾನ ಕಾರ್ಯದರ್ಶಿ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಕೋಶಾಧಿಕಾರಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ, ಸಂಘಟನಾ ಕಾರ್ಯದರ್ಶಿ ಕೆ.ಎಂ ಶರೀಫ್ ಫೈಝಿ ಕಡಬ, ಕಾರ್ಯಾಧ್ಯಕ್ಷರಾದ ಉಸ್ಮಾನುಲ್ ಫೈಝಿ ತೋಡಾರು, ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ, ಇಸ್ತಿಖಾಮ ಕರ್ನಾಟಕ ರಾಜ್ಯ ಸಮಿತಿಯ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಅಬೂಬಕರ್ ಸಿದ್ದೀಕ್ ದಾರಿಮಿ ಮೂಡುಬಿದಿರೆ, ಕೆ.ಎಂ ಖಾಸಿಂ ದಾರಿಮಿ ಸವಣೂರು, ಸಮಸ್ತ ಕೇಂದ್ರ ವಿದ್ಯಾಬ್ಯಾಸ ಮಂಡಳಿ ಸದಸ್ಯರಾದ ಹಾಜಿ ಅಬೂಬಕರ್ ಗೋಳ್ತಮಜಲು, ಹಾಜಿ ಕೆ.ಎಸ್ ಇಸ್ಮಾಯಿಲ್ ಕಲ್ಲಡ್ಕ, ಕಾಶಿಪಟ್ನ ಜುಮಾ ಮಸೀದಿಯ ಅಧ್ಯಕ್ಷರಾದ ಕೆ.ಎಸ್ ಪುತ್ತುಮೋನು, ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News