1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ: ಕರ್ನಾಟಕದ ನಾಲ್ಕು ಘಟನೆಗಳು; 132 ಹುತಾತ್ಮರ ಹೆಸರು ಅನಾವರಣ

Update: 2023-09-09 11:43 GMT

ಮಂಗಳೂರು, ಸೆ.9: ಕರ್ನಾಟಕದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿ ನಾಲ್ಕು ಘಟನೆಗಳು ಹಾಗೂ ಆ ಘಟನೆಗಳಲ್ಲಿ ಪ್ರಾಣತ್ಯಾಗಗೈದ 132 ಹುತಾತ್ಮರ ಹೆಸರುಗಳ ಫಲಕವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ಅನಾವರಣಗೊಳಿಸಲಾಯಿತು.

ಹಿರಿಯ ಸ್ವಾತಂತ್ರ ಹೋರಾಟಗಾರ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದ ಸಂದರ್ಭ ದಿಲ್ಲಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ಶಂಸುಲ್ ಇಸ್ಲಾಂ ಅವರು ಈ ಫಲಕಗಳನ್ನು ಅನಾವರಣಗೊಳಿಸಿದರು. ಸಂಶೋಧಕರೂ ಆಗಿರುವ ಡಾ. ಶಂಸುಲ್ ಅವರು ಪ್ರಥಮ ಸ್ವಾತಂತ್ರ ಸಂಗ್ರಾಮದ ಅವಧಿಯ ಪತ್ರಾಗಾರದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದ ಹುತಾತ್ಮರ ಪಟ್ಟಿ ಇದಾಗಿದೆ.ಕರ್ನಾಟಕದಲ್ಲಿ ನಡೆದ ನಾಲ್ಕು ಘಟನೆಗಳಲ್ಲಿ ನರಗುಂದ ದಂಗೆ, ಕೊಪ್ಪಳ ಕೋಟೆ ಕದನ 1858, ಹಲಗಲಿ ಬೇಡರ ದಂಗೆ ಸೇರಿವೆ.

ಈ ನಡುವೆ, ಕಾಲೇಜಿನಲ್ಲಿ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಎಡಪಂಥೀಯ ಚಿಂತನೆಗಳನ್ನು ಕಾಲೇಜು ಆವರಣದಲ್ಲಿ ಬಿತ್ತಬಾರದು, ಮಂಗಳೂರು ವಿವಿಯನ್ನು ರಕ್ಷಿಸಿ, ಸಂಶುಲ್ ಇಸ್ಲಾಂ ಹಿಂದಕ್ಕೆ ಹೋಗಿ ಎಂಬ ಘೋಷಣೆಯೊಂದಿಗೆ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.




ಈ ಸಂದರ್ಭ ಮಾತನಾಡಿದ ಸಂಶೋಧಕ ಶಂಸುಲ್ ಇಸ್ಲಾಂ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಭಾರತ ಮಾತೆಯನ್ನು ಗೌರವಿಸುತ್ತದೆ. ನಾವು ಹುತಾತ್ಮರ ಬಗ್ಗೆ ಮಾತನಾಡಲು ವಿಫಲವಾದಾಗ, ಅದು ಕೆಟ್ಟ ಸಂದೇಶವನ್ನು ಕಳುಹಿಸುತ್ತದೆ. ಪ್ರತಿಭಟನಾಕಾರರು ಆರ್ಎಸ್ಎಸ್ಗೆ ಸಂಬಂಧಿಸಿದ ದಾಖಲೆಗಳನ್ನು ಓದಿದರೆ ಅದು ರಾಷ್ಟ್ರ ವಿರೋಧಿ ಮತ್ತು ಮಾನವೀಯತೆಗೆ ವಿರುದ್ಧವಾಗಿದ್ದು, ಅವರು ನಾಚಿಕೆಯಿಂದ ತಲೆ ತಗ್ಗಿಸುತ್ತಾರೆ ಎಂದರು.

ಮಹಾತ್ಮ ಗಾಂಧಿಯವರು ಸನಾತನ ಧರ್ಮೀಯರು. ಗಾಂಧಿಯನ್ನು ಕೊಂದವರು ಯಾರು? ಅವರು ಪಾಕಿಸ್ತಾನಿ ಅಥವಾ ಐಎಸ್ ಏಜೆಂಟ್ ನಿಂದ ಕೊಲ್ಲಲ್ಪಟ್ಟಿಲ್ಲ, ಆದರೆ ನಕಲಿ ಮತ್ತು ಹುಸಿ ರಾಷ್ಟ್ರೀಯತಾವಾದಿಗಳಿಂದ ಕೊಲ್ಲಲ್ಪಟ್ಟರು ಎಂದು ಅವರು ಹೇಳಿದರು.


ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕರಿಗೇ ಮುತ್ತಿಗೆ ಯತ್ನ!

ಡಾ. ಶಂಸುಲ್ ಇಸ್ಲಾಂ ಅವರು ಕಾರ್ಯಕ್ರಮಕ್ಕೆ ಬರುವ ಸಂದರ್ಭ ಅವರಿಗೆ ಮುತ್ತಿಗೆ ಹಾಕಬೇಕೆಂದಿದ್ದ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್, ಇತಿಹಾಸ ತಜ್ಞ ಪ್ರೊ. ಕೇಶವನ್ ವೇಲುಹತ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.

ಅಲ್ಲಿದ್ದ ಪೊಲೀಸರು ತಕ್ಷಣ ಪ್ರೊ. ಕೇಶವನ್ ಅವರನ್ನು ಬೆಂಗಾವಲಿನೊಂದಿಗೆ ಕಾರ್ಯಕ್ರಮದ ವೇದಿಕೆಯತ್ತ ಸುರಕ್ಷಿತವಾಗಿ ಕರೆದೊಯ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News