ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿಯಾಗುತ್ತಾರೆ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಮಂಗಳೂರು: ದೇಶದಲ್ಲಿ ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ಚುನಾವಣೆಯೇ ನಡೆಯದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕೆ ಪಕ್ಷದ ನಾಯಕರು, ಕಾರ್ಯ ಕರ್ತರು ಶ್ರಮಿಸಬೇಕು ಎಂದರು.
ಈಗಾಗಲೆ ನ್ಯಾಯಾಂಗ, ಇಡಿ, ಐಟಿ ಸೇರಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನೂ ನಿಯಂತ್ರಣ ಮಾಡಲಾಗಿದೆ. ಮತ್ತೆ ಅಧಿಕಾರ ಸಿಕ್ಕರೆ ಸರ್ವಾಧಿಕಾರಿ ಆಗ್ತಾರೆ. ಇಂಥವರಿಗೆ ಅಧಿಕಾರ ನೀಡಬೇಡಿ. ನಮ್ಮನ್ನು ಪೂರ್ತಿ ಮುಗಿಸಲು ಪಕ್ಷದ ಎಲ್ಲ ಅಕೌಂಟ್ ಸೀಝ್ ಮಾಡಿದರು. ಆದರೆ ಬಿಜೆಪಿ 6 ಸಾವಿರ ಕೋಟಿ ರೂ. ಎಲೆಕ್ಷನ್ ಬಾಂಡ್ ನ್ನು ಕಾಳಧನಿಕರಿಂದ ತೆಗೆದು ಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಆಗಿದ್ದು, ರಾಜ್ಯದ ಮುಖ್ಯಮಂತ್ರಿ ದಿಲ್ಲಿಯಲ್ಲಿ ಸತ್ಯಾಗ್ರಹ ಮಾಡಬೇಕಾಯಿತು ಎಂದು ಅವರು ಹೇಳಿದರು.
ಧರ್ಮದ ಹೆಸರಲ್ಲಿ ರಾಜಕೀಯ ಮಾಡೋರು ಬಡವರು, ದಲಿತರನ್ನು ತುಳಿಯುವ ಗುರಿ ಇಟ್ಕೊಂಡಿದಾರೆ. ಇದಕ್ಕೆ ಜನರು ತಕ್ಕ ಉತ್ತರ ನೀಡಬೇಕು. ಕಾರ್ಯಕರ್ತರು ಕಾಂಗ್ರೆಸ್ ನೀಡಿದ, ಮಾಡಿದ ಸಾಧನೆಗಳನ್ನೂ ಜನರಿಗೆ ತಿಳಿಸಬೇಕು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ, ಬಜೆಟ್ ನೋಡಿದ ಮೇಲೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲಿದ್ದೇವೆ. ಅದಕ್ಕೆ ತಳ ಹಂತದ ಕಾರ್ಯಕರ್ತರು ಹೊಣೆಗಾರಿಕೆಬೇಕು. ಮಂಗಳೂರು, ಉಡುಪಿ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿ ಸೀಟು ಗೆಲ್ಲಬೇಕು ಎಂದು ನೆರೆದಿದ್ದ ನಾಯಕರಿಗೆ, ಕಾರ್ಯಕರ್ತರಿಗೆ ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಮೊದಲಾದವರು ಮಾತನಾಡಿದರು.
ರಾಜ್ಯದ ಗೃಹ ಸಚಿವ ಡಾ. ಪರಮೇಶ್ವರ್, ಎಂಎಲ್ಸಿ ಬಿ.ಕೆ. ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ, ಸಚಿವರಾದ ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಸುಧಾಕರ್, ಕೆ. ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ. ಜಾರ್ಜ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಿಎಂ ಡಾ.ಎಂ. ವೀರಪ್ಪ ಮೊಯ್ಲಿ, ಶಾಸಕ ಆರ್.ವಿ. ದೇಶಪಾಂಡೆ, ಮಾಜಿ ಸಚಿವರಾದ ಮೋಟಮ್ಮ, ಟಿ.ಬಿ. ಜಯಚಂದ್ರ, ರಮಾನಾಥ ರೈ, ಆಂಜನೇಯ, ಮಾಜಿ ಎಂಪಿ ಉಗ್ರಪ್ಪ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕ ಅಶೋಕ್ ರೈ, ಮುಖಂಡರಾದ ಶಕುಂತಳಾ ಶೆಟ್ಟಿ, ಗಫೂರ್, ಐವನ್ ಡಿಸೋಜ, ವಿನಯ ಕುಮಾರ್ ಸೊರಕೆ, ಮಿಥುನ್ ರೈ, ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು, ಜಿಲ್ಲೆ, ರಾಜ್ಯದ ನಾಯಕರು ಇದ್ದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಡ್ರಾ. ಮಂಜುನಾಥ ಭಂಡಾರಿ ಮತ್ತು ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.