ಕಾನ: ರಸ್ತೆ ಕಾಮಗಾರಿಗೆ ಅಗೆದಿದ್ದ ಹೊಂಡಕ್ಕೆ ಬೈಕ್ ಸಮೇತ ಬಿದ್ದ ಸವಾರ

Update: 2024-10-11 09:23 GMT

ಸುರತ್ಕಲ್: ಇಲ್ಲಿನ ಕಾನಾ- ಬಾಳ ರಸ್ತೆಯ ಸುಗ್ಗಿ ಬಾರ್ ಸಮೀಪ ಬಹಳ ದಿನಗಳಿಂದ ಇದ್ದ ಹೊಂಡಕ್ಕೆ ಯುವಕನೋರ್ವ ದ್ವಿಚಕ್ರ ವಾಹನದೊಂದಿಗೆ ಬಿದ್ದು ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಕಾಟಿಪಳ್ಳ 1ನೇ ಬ್ಲಾಕ್ ನಿವಾಸಿ ಧನುಷ್ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ. ಈತ ಸುರತ್ಕಲ್‌ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಸಹೋದರಿಗೆ ಮನೆಯಿಂದ ಊಟ ನೀಡಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು,  ಗಾಯಾಳು ಯುವಕ ಸುರತ್ಕಲ್‌ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.

ರಸ್ತೆಯಲ್ಲಿ ಇರುವ ಗುಂಡಿಯ ಬಳಿ ಬ್ಯಾರಿಕೆಟ್‌ ಇಡಲಾಗಿತ್ತಾದರೂ ಅದಕ್ಕೆ ಯಾವುದೇ ರಿಫ್ಲೆಕ್ಟರ್‌ ಸ್ಟಿಕ್ಕರ್‌ ಅಳವಡಿಸಲಾಗಿರಲಿಲ್ಲ. ಹೀಗಾಗಿ ಯುವಕನಿಗೆ ಬ್ಯಾರಿಕೇಟ್‌ ಮತ್ತು ಗುಂಡಿ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. 

ಸುಗ್ಗಿ ಬಾರ್‌ & ರೆಸ್ಟೋರೆಂಟ್‌ ಬಳಿ ಹೈಮಾಸ್ಟ್ ದೀಪ ಇತ್ತು. ಈಗ ಅದನ್ನು ತೆರವುಗೊಳಿಸಿ ಗ್ಯಾಸ್‌ ಸಾಗಾಟದ ಬುಲೆಟ್‌ ಟ್ಯಾಂಕರ್‌ ಗಳು ಪಾರ್ಕಿಂಗ್‌ಗೆ ಹೋಗಲು ರಸ್ತೆ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಜೊತೆಗೆ ಈ ರಸ್ತೆಯಲ್ಲಿ ಗ್ಯಾಸ್‌ ಸಾಗಾಟದ ಬುಲೆಟ್‌ ಟ್ಯಾಂಕರ್‌ ಚಾಲಕರು ರಸ್ತೆ ಸಂಚಾರದ ನಿಯಮಗಳನ್ನು ಗಾಳಿಗೆ ತೂರಿ ಸಂಚಾರ ಮಾಡುತ್ತಿರುತ್ತಾರೆ. ಈ ಬಗ್ಗೆ ಸ್ಥಳಿಯರು ದೂರು ನೀಡಿದರೂ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕಾಂಕ್ರಿಟ್‌ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಇನ್ನೂ ರಸ್ತೆಯನ್ನು ಪೂರ್ಣಗೊಳಿಸಿಲ್ಲ. ಸ್ಥಳೀಯ ಬಿಜೆಪಿ ಖಾರ್ಪೊರೇಟರ್‌ ಸರಿತಾ ಶಶಿಧರ್ ಅವರು ಅಸಮರ್ಪಕ ರಸ್ತೆಯ ಬಗ್ಗೆ ಮಾತನಾಡುತ್ತಿಲ್ಲ. ಈ ಹೊಂಡ ಸರಿ ಪಡಿಸಲು ಮತ್ತು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ಜನರು ಅಪಘಾತಕ್ಕೀಡಾಗಬೇಕು, ಎಷ್ಟು ಜನರು ರಕ್ತಹರಿಸಬೇಕು. ಪ್ರಾಣ ಬಲಿಗಾಗಿ ಸುರತ್ಕಲ್‌ ಮಹಾನಗರ ಪಾಲಿಕೆ ಕಾಯುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

  ಶಾಸಕ ಭರತ್‌ ಶೆಟ್ಟಿಯವರು ಆದಷ್ಟು ಶೀಘ್ರ ಕಾನಾ-ಬಾಳ ರಸ್ತೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿರುವ ಸಾರ್ವಜನಿಕರು, ಪೂರ್ತಿಯಾಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ನಾಗರಿಕರು ಸೇರಿ ಮಹಾ ನಗರ ಪಾಲಿಕೆಯ ಸುರತ್ಕಲ್‌ ವಲಯ ಕಚೇರಿಯ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾನಾ-ಬಾಳ ರಸ್ತೆ ಪೂರ್ಣಗೊಳಿಸುವ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌, ಶಾಸಕರಿಗೇ ಸಾಧ್ಯವಾಗಿಲ್ಲ. ಈ ರಸ್ತೆಯಲ್ಲಿ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ. ಒಂದೆಡೆ ಟ್ಯಾಂಕರ್ ನವರು ಮೈಮೇಲೆ ಬಂದ ಹಾಗೆ ಚಲಿಸುತ್ತಾರೆ. ಇದರ ಬಗ್ಗೆ ಸ್ಥಳೀಯರು ಎಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ರಸ್ತೆ ಕಾಮಗಾರಿ ಪೂರ್ಣಗೊಳಿಸದೇ ಇದೇ ರೀತಿ ದಿನ ದೂಡಿದರೆ ಸ್ಥಳೀಯರ ಜೊತೆ ಸೇರಿಕೊಂಡು ಮನಪಾ ಎದುರು ಉಗ್ರರೀತಿಯಲ್ಲಿ ಪ್ರತಿಭಟಿಸಲಾಗುವುದು.

‌ಕಿಶೋರ್‌ ಶೆಟ್ಟಿ 

 

ಸುರತ್ಕಲ್‌ - ಕಾನ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಅವೈಜ್ಞಾನಿಕ, ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಶಾಸಕ ಭರತ್‌ ಶೆಟ್ಟಿ ಅವರು ಮಾತನಾಡುತ್ತಿಲ್ಲ. ಅವರು ಈ ಪ್ರಮುಖ ರಸ್ತೆಯ ಕಾಮಗಾರಿಯನ್ನೇ ಮರೆತು ಹೋಗಿದ್ದಾರೆ. ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸಿರುವುದು ಕಣ್ಣಿಗೆ ಕಾಣಿಸುತ್ತಿದೆ. ಆದರೂ ಅಧಿಕಾರಿಗಳು ಗುತ್ತಿಗೆದಾರನ ಮೇಲೆ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ. ಅಧಿಕಾರಿಗಳೂ ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಬಗ್ಗೆ ಸಂಶಯವಿದೆ.

ಬಿಕೆ ಇಮ್ತಿಯಾಝ್‌, ಸಮಾಜಿಕ ಹೋರಾಟಗಾರರು, ಕಾನ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News