ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆ; ಮಂಗಳೂರು ಅಂಚೆ ವಿಭಾಗಕ್ಕೆ ರಾಜ್ಯದಲ್ಲೇ ಪ್ರಥಮ
ಮಂಗಳೂರು, ಅ.23: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ’ಯಡಿ 2023ರ ಎಪ್ರಿಲ್ ನಿಂದ ಸೆಪ್ಟೆಂಬರ್‌ವರೆಗೆ 12,282 ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆ’ಗಳನ್ನು ತೆರೆಯುವ ಮೂಲಕ ಮಂಗಳೂರು ಅಂಚೆ ವಿಭಾಗವು ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿದೆ.
ಎರಡು ವರ್ಷದ ಅವಧಿಗೆ ಮಹಿಳೆಯರು ಈ ಯೋಜನೆಯಡಿ ಠೇವಣಿ ಇಡುವುದಕ್ಕೆ ಅವಕಾಶವಿದೆ. ಕನಿಷ್ಠ 1 ಸಾವಿರ ರೂ.ನಿಂದ 2 ಲಕ್ಷ ರೂ.ವರೆಗೆ ಠೇವಣಿ ಇಟ್ಟರೆ ಶೇ.7.5ರ ಆಕರ್ಷಕ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸುವ ಯೋಜನೆ ಇದಾಗಿದೆ.
2 ಲಕ್ಷ ರೂ. ಠೇವಣಿ ಇರಿಸಿದರೆ ಖಾತೆದಾರರಿಗೆ ಬಡ್ಡಿ ಸಹಿತ 2,32,044 ರೂ.ವನ್ನು ಹಿಂದಿರುಗಿಸಲಾಗುತ್ತದೆ. ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದ ಮಹಿಳೆಯರಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು, 2025ರ ಮಾ. 31ರಂದು ಯೋಜನೆ ಮುಕ್ತಾಯಗೊಳ್ಳಲಿದೆ.
ಪ್ರತೀ ಮಹಿಳೆಯ ಹೆಸರಿನಲ್ಲಿ 1 ಠೇವಣಿ ಇಡಲು ಮಾತ್ರ ಅವಕಾಶವಿದ್ದು, 3 ತಿಂಗಳ ಬಳಿಕ ಮತ್ತೊಮ್ಮೆ ಠೇವಣಿ ಇಡಬಹುದಾಗಿದೆ ಎಂದು ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.