ಮಂಗಳೂರು: ಡಿ.30ರಂದು ವಂದೇ ಭಾರತ್ ಎಕ್ಸ್ ‌ಪ್ರೆಸ್ ರೈಲಿಗೆ ಚಾಲನೆ

Update: 2023-12-30 03:49 GMT

Photo: PTI

ಮಂಗಳೂರು, ಡಿ.29: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಸುಮಾರು 350 ಕೋಟಿ ರೂ.ಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿ ಕೂಡ ಆರಂಭವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಮಂಗಳೂರು-ಮಡ್ಗಾಂವ್(ಗೋವಾ) ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಸಂಚಾರಕ್ಕೆ ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸಿದ್ಧತಾ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ದ.ಕ.ಜಿಲ್ಲೆಯಲ್ಲಿ ಕೇಂದ್ರ ಸರಕಾರದಿಂದ ರೈಲ್ವೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 416.98 ಕೋಟಿ ರೂ.ಮಂಜೂರಾಗಿದೆ. ಸೆಂಟ್ರಲ್ ನಿಲ್ದಾಣದಲ್ಲಿ ವಿವಿಧ ಕಾಮಗಾರಿಗೆ 13.29 ಕೋಟಿ ರೂ. ಸಕಲೇಶಪುರ-ಮಂಗಳೂರು ವರೆಗೆ 7 ಲೆವೆಲ್ ಕ್ರಾಸ್ ಮೇಲ್ಸೇತುವೆಯಾಗಿ ಪರಿವರ್ತಿಸಲು 44.13 ಕೋಟಿ ರೂ., ಸೆಂಟ್ರಲ್ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಆಧುನೀಕರಣಗೊಳಿಸಲು 1.40 ಕೋಟಿ ರೂ., ಹೊಸ ಫ್ಲ್ಯಾಟ್‌ಫಾರಂಗಳಿಗೆ ಶೆಲ್ಟರ್, ಲಿಫ್ಟ್ ಅಳವಡಿಕೆಗೆ 2.5 ಕೋಟಿ ರೂ. ಮಂಜೂರಾಗಿದೆ. ಪ್ರಸಕ್ತ 1,537.65 ಕೋಟಿ ರೂ.ಗಳ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ವಂದೇ ಭಾರತ್ ರೈಲು ಸಂಚಾರದಿಂದ ಉಡುಪಿ, ಕಾರವಾರ ಹಾಗೂ ಗೋವಾ ಪ್ರವಾಸಿಗರಿಗೆ ಬಹಳ ಅನುಕೂಲವಾಗಲಿದೆ. ಈ ರೈಲು ಸಂಚಾರ ಧಾರ್ಮಿಕ, ಬೀಚ್ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ನೆರವಾಗಲಿದೆ ಎಂದು ಸಂಸದ ನಳಿನ್ ಅಭಿಪ್ರಾಯಿಸಿದರು.

ತಿರುವನಂತಪುರ-ಕಾಸರಗೋಡು ವಂದೇ ಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಣೆ ಅಥವಾ ಕೊಚ್ಚಿನ್-ಮಂಗಳೂರು ವಂದೇ ಭಾರತ್ ರೈಲಿಗೆ ಮನವಿ ಸಲ್ಲಿಸಲಾಗಿದೆ. ಮಂಗಳೂರು-ಬೆಂಗಳೂರು ನಡುವೆ ಮಾರ್ಚ್ ಬಳಿಕ ವಂದೇ ಭಾರತ್ ಸಂಚಾರ ಸಾಧ್ಯವಾಗಲಿದೆ. ಪ್ರಸಕ್ತ ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಹಳಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಸಕಲೇಶಪುರ ವರೆಗೆ ಕಾಮಗಾರಿ ಮಾರ್ಚ್ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದರು.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 17 ಕೋಟಿ ರೂ.ಗಳಲ್ಲಿ 4 ಮತ್ತು 5ನೇ ಫ್ಲ್ಯಾಟ್‌ಫಾರಂ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ. ಇಲ್ಲಿ ಎಲ್ಲ ಮೂಲ ಸೌಕರ್ಯ ಅಳವಡಿಕೆ ಕಾಮಗಾರಿ ಜನವರಿ 15ರೊಳಗೆ ಮುಕ್ತಾಯಗೊಳ್ಳಲಿದೆ. ಈ ಸಂದರ್ಭ ಇದರ ಲೋಕಾರ್ಪಣೆ ಕೂಡ ನೆರವೇರಲಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.

ಈ ಸಂದರ್ಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಡಲ ಬಿಜೆಪಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ರೈಲ್ವೆ ಪಾಲಕ್ಕಾಡ್ ವಿಭಾಗೀಯ ಅಧಿಕಾರಿ ಅರುಣ್ ಚತುರ್ವೇದಿ, ಎಡಿಆರ್‌ಎಂ. ಜಯಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News