ಮಂಗಳೂರು: ಹಮಾಸ್ ಗೆಲುವಿಗೆ ಪ್ರಾರ್ಥಿಸುವಂತೆ ಕರೆ ನೀಡಿದ ಆರೋಪ; ವ್ಯಕ್ತಿಯ ಬಂಧನ
ಮಂಗಳೂರು : ಇಸ್ರೇಲ್‌ನಲ್ಲಿ ಸಂಘರ್ಷಕ್ಕಿಳಿದಿರುವ ಹಮಾಸ್‌ನ ಗೆಲುವಿಗೆ ವಿಶೇಷ ಪ್ರಾರ್ಥನೆಗೆ ಕರೆ ನೀಡಿದ ಆರೋಪದಲ್ಲಿ ನಗರದ ಬಂದರ್‌ನ ನಿವಾಸಿ ಝಾಕಿರ್ ಯಾನ ಝಾಕಿ(54) ಎಂಬಾತನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಹಮಾಸ್‌ನ ಗೆಲುವಿಗಾಗಿ ವಿಶೇಷ ಪ್ರಾರ್ಥನೆಗೆ ಕರೆ ನೀಡಿದ್ದ ಝಾಕಿರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎನ್ನಲಾಗಿದೆ.
30 ಸೆಕೆಂಡುಗಳ ವಿಡಿಯೊದಲ್ಲಿ ತನ್ನನ್ನು ಮಂಗಳೂರಿನ ಖಬರಸ್ಥಾನ ಪ್ರೇಮಿ ಸಂಘದ ಸದಸ್ಯ ಎಂದು ಗುರುತಿಸಿ ಕೊಂಡಿದ್ದ ಝಾಕೀರ್ ಫೆಲೆಸ್ತೀನ್, ಗಾಝಾ ನಿವಾಸಿಗಳು ಮತ್ತು ಹಮಾಸ್ ಪರ ತನ್ನ ಗುಂಪಿನ ಸದಸ್ಯರು ‘ದುವಾ’ (ವಿಶೇಷ ಪ್ರಾರ್ಥನೆ) ನಡೆಸುವಂತೆ ಮನವಿ ಮಾಡಿದ್ದ ಎಂದು ಆರೋಪಿಸಲಾಗಿದೆ.
ಈ ಕೃತ್ಯದ ಬಗ್ಗೆ ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಅ.14ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ವಿನಾಯಕ ತೋರಗಲ್ ಎಂಬವರು ಸ್ವಯಂ ದೂರು ದಾಖಲಿಸಿದ್ದರು. ಆರೋಪಿ ಝಾಕಿರ್ ಅನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಲತ: ಜೋಕಟ್ಟೆಯ ನಿವಾಸಿಯಾಗಿದ್ದ ಆರೋಪಿ ಝಾಕಿರ್ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು ದಾಖಲಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.