ವಿಎಚ್‌ಪಿ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಉಪಸ್ಥಿತಿ ಆಘಾತಕಾರಿ: ಸಿಪಿಐಎಂ

Update: 2024-10-24 09:10 GMT

ಪುತ್ತೂರು: ಶಾಸಕ ಅಶೋಕ್ ರೈ ಅವರು ಬಿಜೆಪಿ, ಸಂಫಪರಿವಾರಕ್ಕೆ ಸೇರಿದ ವಿಶ್ವಹಿಂದು ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಖಂಡನೀಯ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ ಭಟ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು,  ಪುತ್ತೂರು ಶಾಸಕರು ಬಿಜೆಪಿಯಿಂದ ವಲಸೆ ಬಂದವರಾಗಿದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಕಾರಣದಿಂದ ಕ್ಷೇತ್ರದ ಜಾತ್ಯಾತೀತ ಮತದಾರರು, ಅಲ್ಪಸಂಖ್ಯಾತ ಸಮುದಾಯಗಳ ಮತದಾರರು ಕೋಮುವಾದಿಗಳಿಗೆ, ಕೋಮುವಾದಕ್ಕೆ ಹಿನ್ನಡೆ ಉಂಟುಮಾಡಲೆಂದೇ ಅವರಿಗೆ ಒಗ್ಗಟ್ಟಿನಿಂದ ಮತ ನೀಡಿದ್ದರು. ಕಾಂಗ್ರೆಸ್ ಪಕ್ಷದ ಮತಗಳ ಜೊತೆಗೆ ಈ ಎಲ್ಲಾ ವಿಭಾಗಗಳ ಒಗ್ಗಟ್ಟಿನ ಮತ ಚಲಾವಣೆಯಿಂದ ಮಾತ್ರ ಗೆಲುವು ಕಂಡಿದ್ದಾರೆ. ಹೀಗಿರುವಾಗ ಅವರು ತಮಗೆ ಮತ ನೀಡಿದ ಮತದಾರರ ಭಾವನೆಗಳಿಗೆ ಪೂರಕವಾಗಿ ವರ್ತಿಸುವುದನ್ನು ಸಹಜವಾಗಿ ನಿರೀಕ್ಷಿಸಲಾಗುತ್ತದೆ. ಕಾಂಗ್ರೆಸ್ ಪಕ್ಷವು ಅದರ ಜಾತ್ಯತೀತ ಸಿದ್ದಾಂತದಂತೆ ಸಂಘಪರಿವಾರದ ಕೋಮುವಾದದ ವಿರುದ್ಧ ನಿಲ್ಲುತ್ತದೆ ಎಂಬ ನಂಬಿಕೆಯೂ ಅಶೋಕ್ ರೈ ಪರ ಮತ ಚಲಾವಣೆಗೆ ಕಾರಣವಾಗಿತ್ತು‌. ಆದರೆ ಅವರು ಈಗಲೂ ಬಿಜೆಪಿ ಪರಿವಾರದ ಸಂಘಟನೆಗಳ, ಕೋಮುವಾದಿ ಸಂಘಟನೆಗಳ ಸಭೆಗಳಲ್ಲಿ ಭಾಗವಹಿಸುವುದು, ಆತ್ಮೀಯ ಒಡನಾಟ ಹೊಂದಿರುವುದು ಅವರ ಪರವಾಗಿ ಮತ ಚಲಾಯಿಸಿದ ಅಲ್ಪಸಂಖ್ಯಾತ ಸಮುದಾಯಗಳ, ಜಾತ್ಯಾತೀತ ಮನೋಭಾವದ ಮತದಾರರಿಗೆ ಆಘಾತ ಉಂಟುಮಾಡಿದೆ ಎಂದಿದ್ದಾರೆ.

ವಿಶ್ವ ಹಿಂದು ಪರಿಷತ್, ಹಿಂದೂ ಜಾಗರಣ ವೇದಿಕೆ, ಹಿಂದೂ ಯುವ ಸೇನೆ ಹೀಗೆ ಹಿಂದೂ ಧರ್ಮದ ಹೆಸರನ್ನು ಇಟ್ಟುಕೊಂಡು ಬಿಜೆಪಿ ಪರಿವಾರದ ಹಲವು ಸಂಘಟನೆಗಳಿವೆ. ಹಿಂದೂ ಶಬ್ದ ಇದ್ದ ಮಾತ್ರಕ್ಕೆ ಅವರು ಹಿಂದೂಗಳ ಪ್ರತಿನಿಧಿ ಸಂಘಟನೆಗಳೇನಲ್ಲ. ಅವೆಲ್ಲವೂ ಸಂಘಪರಿವಾರದ ಅಂಗ ಸಂಸ್ಥೆಗಳು ಮಾತ್ರ. ಹಿಂದು ಧರ್ಮಕ್ಕೂ, ಬಿಜೆಪಿ ಜೊತೆಗಿರುವ ಈ ಸಂಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ‌. ಈ ಸಂಘಟನೆಗಳು ಹಿಂದು ಧರ್ಮದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಗೆ ರಾಜಕೀಯ ಲಾಭ ತಂದುಕೊಡುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಾ ಬಂದಿರುವುದು ರಾಜಕೀಯದ ಪ್ರಾಥಮಿಕ ತಿಳುವಳಿಕೆ ಉಳ್ಳ ಎಲ್ಲರಿಗೂ ತಿಳಿದಿದೆ. ಬಹು ಸಂಖ್ಯಾತ ಹಿಂದುಗಳು ಬಿಜೆಪಿಯ ಈ ವರ್ತುಲದಿಂದ ಹೊರಗಿದ್ದಾರೆ ಎಂದು ಹೇಳಿದ್ದಾರೆ.

ಈ ಕಟು ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಅಥವಾ ಇತರ ಜಾತ್ಯಾತೀತ ಪಕ್ಷಗಳ ನಾಯಕರುಗಳೇ ಅಂತಹಾ ಕೋಮು ವಿಷಬೀಜ ಬಿತ್ತುವ ಸಂಘಟನೆಗಳನ್ನು ಪರೋಕ್ಷವಾಗಿ ಬೆಳೆಸುತ್ತಿರುವುದಾಗಿದೆ. ಪುತ್ತೂರು ಶಾಸಕರ ಈ ವರ್ತನೆ ಖಂಡನೀಯವಾಗಿದೆ.‌ ಕೋಮುವಾದಿ ಸಂಘಟನೆಗಳನ್ನು ಬೆಂಬಲಿಸುವ ಶಾಸಕ ಅಶೋಕ ರೈ ಅವರ ನಡವಳಿಕೆಯ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷಕ್ಕೂ ಇದೆ. ಅಲ್ಪಸಂಖ್ಯಾತರು, ಜಾತ್ಯತೀತರು, ಎಡ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂಬ ನೆಲೆಯಲ್ಲಿ ಮತಚಲಾಯಿಸಿದ್ದಾರೆಯೇ ಹೊರತು ಅಶೋಕ್ ರೈ ಅಂತಲ್ಲ. ಆದುದರಿಂದ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಅಶೋಕ್ ರೈ ಅವರ ಈ ನಡೆಯ ಕುರಿತು ಕಾಂಗ್ರೆಸ್ ಪಕ್ಷ ಸ್ಪಷ್ಟೀಕರಣ ನೀಡಬೇಕು ಎಂದು ಸಿಪಿಐಎಂ ಮುಖಂಡ ಬಿ ಎಂ ಭಟ್ ಆಗ್ರಹಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News