ತುಂಬೆ| ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿ ನಗ-ನಗದು ಕಳವು: ಪ್ರಕರಣ ದಾಖಲು
ಬಂಟ್ವಾಳ : ತುಂಬೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗಿಲಿನ ಚಿಲಕ ಮುರಿದು ಒಳಗೆ ನುಗ್ಗಿದ ಕಳ್ಳರು ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಮಂಗಳವಾರ ಮುಂಜಾನೆ ವೇಳೆಗೆ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಕಚೇರಿಯಲ್ಲಿರಿಸಿದ್ದ ಸುಮಾರು ಒಂದೂವರೆ ಕೆ.ಜಿ ತೂಕದ ಬೆಳ್ಳಿಯ ಜಲದ್ರೋಣ, ಗೊದ್ರೇಜ್ , ಕ್ಯಾಸ್ ಡ್ರಾಯರ್ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 50 ಸಾವಿರದಷ್ಟು ಹಣವನ್ನು ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ.
ದೇವಸ್ಥಾನದ ಸುತ್ತ ಮುಂಜಾಗ್ರತಾ ಕ್ರಮವಾಗಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆಯಾದರೂ ಕಳ್ಳರ ತಂಡ ಕ್ಯಾಮರಾ ಡಿ.ವಿ.ಆರ್ ನ್ನು ಕೂಡ ಬಿಡದೆ ಎಗರಿಸಿದ್ದಾರೆ.
ಇಂದು ಬೆಳಿಗ್ಗೆ ದೇವಸ್ಥಾನದ ಸಿಬ್ಬಂದಿಯೊರ್ವರು 6.ಗಂಟೆಗೆ ಬಂದಾಗ ಮುಂಬಾಗಿಲು ಚಿಲಕ ಮುರಿದಿದ್ದು ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ದೇವಸ್ಥಾನದ ಸೇವಾ ಸಮಿತಿಯ ಗೌರವಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆಯವರಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ನಿರೀಕ್ಷಕ ಶಿವಕುಮಾರ್, ಠಾಣಾಧಿಕಾರಿ ಹರೀಶ್, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.