ಕುಡುಬಿ ಸಮುದಾಯದವರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಆಗ್ರಹಿಸಿ ಹಕ್ಕೊತ್ತಾಯ ಜಾಥಾ

Update: 2024-11-05 14:03 GMT

ಮಂಗಳೂರು: ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಅನುಚ್ಛೇದ 341 (1) ರಂತೆ ಇದ್ದ ಸಾಂವಿಧಾನಿಕ ಹಕ್ಕನ್ನು ಮರಳಿ ನೀಡಬೇಕೆಂದು ಒತ್ತಾಯಿಸಿ ಕುಡುಬಿ ಸಮುದಾಯದವರು ನಗರದಲ್ಲಿ ಮಂಗಳವಾರ ಹಕ್ಕೊತ್ತಾಯ ಜಾಥಾ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ನಗರದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದ ವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಕುಡುಬಿ ಸಮುದಾಯದವರು ತಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

1936ರ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕುಡುಬಿ ಸಮುದಾಯದ ಹೆಸರು ಒಳಗೊಂಡಿತ್ತು. 1950ರಲ್ಲಿ ಕುಡುಬಿ ಜಾತಿ ಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿ ಸಾಂವಿಧಾನಿಕ ರಕ್ಷಣೆ ನೀಡಲಾಗಿತ್ತು. ಆದರೆ, 1956ರ ಮಾರ್ಪಾಡು ಆದೇಶದಲ್ಲಿ ಕುಡುಬಿ ಜಾತಿಯ ಹೆಸರನ್ನು ಕುಡುಂಬನ್ ಎಂದು ತಪ್ಪಾಗಿ ಮುದ್ರಿಸಿ ನಮ್ಮ ಸಮುದಾಯವನ್ನು ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಕೇಂದ್ರ ಸರಕಾರವು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು ಆಗ್ರಹಿಸಿದರು.

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 70,000 ಜನಸಂಖ್ಯೆಯನ್ನು ಹೊಂದಿರುವ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರಕಾರ ಹಾಗೂ ನಂತರ ಭಾರತ ಸರಕಾರದಿಂದ ಪರಿಶಿಷ್ಟ ಜಾತಿ ಎಂದು ಗುರುತಿಸಲ್ಪಟ್ಟಿದ್ದ ಕುಡುಬಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಅವರು ಹೇಳಿದರು.

ರಾಜಕೀಯ ಬೆಂಬಲವಿಲ್ಲದ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಕುಡುಬಿ ಸಮುದಾಯ ಸಂವಿಧಾನದತ್ತ ಹಕ್ಕನ್ನು ಕಳೆದ 70 ವರ್ಷಗಳಿಂದ ಕಳೆದುಕೊಂಡಿದೆ.1931ರ ಜನಗಣತಿಯಲ್ಲಿ ಜನಗಣತಿಯಲ್ಲಿ ಕುಡುಬಿ ಸಮುದಾಯ ಖಿನ್ನತೆಗೆ ಒಳಗಾದ ಮೂಲ ನಿವಾಸಿಗಳು (ಡಿಪ್ರೆಸ್ಡ್ ಕಾಸ್ಟ್) ಎಂದು ಗುರುತಿಸಿ ಸೌತ್ ಕೆನರಾ ಜಿಲ್ಲೆಯ ಕುಂದಾಪುರ, ಕಾರ್ಕಳ, ಉಡುಪಿ, ಮಂಗಳೂರು ತಾಲೂಕಿನಲ್ಲಿ ವಾಸಿಸುತ್ತಿರುವುದಾಗಿ ಗುರುತಿಸಲಾಗಿದೆ. 1936ರಲ್ಲಿ ಬ್ರಿಟಿಷ್ ಸರಕಾರದ ‘ದಿ ಗವರ್ನಮೆಂಟ್ ಆಫ್ ಇಂಡಿಯಾ (ಷೆಡ್ಯೂಲ್ಡ್ ಕಾಸ್ಟ್) ಆರ್ಡರ್ 1936’ ಕಾಯಿದೆಯಲ್ಲಿಯೂ ಕುಡುಬಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಸ್ವಾತಂತ್ರ್ಯ ನಂತರ ಸಂವಿಧಾನದ ಅನುಚ್ಚೇದ 341(1)ರಂತೆ ‘ದಿ ಕಾನ್ಸಿಟ್ಯೂಷನ್ (ಷೆಡ್ಯೂಲ್ ಕಾಸ್ಟ್) ಆರ್ಡರ್ 1950’ ಭಾಗ ಸಂಖ್ಯೆ 5 ಮದರಾಸು ಪ್ರಾಂತ್ಯದ ಪಟ್ಟಿಯಲ್ಲಿಯೂ ಕ್ರಮ ಸಂಖ್ಯೆ 38ರಲ್ಲಿ ಕುಡುಬಿ ಜಾತಿಯನ್ನು ಸೇರಿಸಿ ಸಾಮಾಜಿಕ ರಕ್ಷಣೆಯ ಹಕ್ಕನ್ನು ನೀಡಲಾಗಿತ್ತು. ಆದರೆ ಸಂವಿಧಾನದ 8ನೇ ತಿದ್ದುಪಡಿ (1956ರ ಕಾಯಿದೆ) ಸಂದರ್ಭ ಸೌತ್ ಕೆನರಾ ಜಿಲ್ಲೆಗೆ ಕುಡುಬ ಜಾತಿಯನ್ನು ಸೇರಿಸುವ ಬದಲು ತಪ್ಪಾಗಿ ‘ಕುಡುಂಬನ್’ ಸೇರಿಸಿರುವುದರಿಂದ ಲೋಪವಾಗಿದೆ. ಬಳಿಕ ಕುಡುಬಿ ಸಮುದಾಯ ಹಿಂದುಳಿದ ಪ್ರವರ್ಗ 1ಕ್ಕೆ ಸೇರಿಸಲ್ಪ ಟ್ಟಿದ್ದು, ಸಾಂವಿಧಾನಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಅವರು ಆರೋಪಿಸಿದರು.

1972ರಲ್ಲಿ ಸಮುದಾಯದ ಸಂಘಟನೆ ರಚಿಸಿ ಈವರೆಗೂ ರಾಜ್ಯದ ಶಾಸಕರು, ಸಚಿವರು, ಲೋಕಸಭಾ ಸದಸ್ಯರು, ಮುಖ್ಯಮಂತ್ರಿ ಸೇರಿದಂತೆ ವಿವಿಧ ಆಯೋಗಗಳ ಅಧ್ಯಕ್ಷರು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಮುದಾಯದ ನಿರಂರ ಪ್ರಯತ್ನದ ಫಲವಾಗಿ 2007ರಲ್ಲಿ ಧಾರವಾಡದ ಕನ್ನಡ ವಿವಿಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಟಿ. ಬಸವನಗೌಡರನ್ನು ಕುಡುಬಿ ಜನಾಂಗದ ಕುಲ ಶಾಸ್ತ್ರೀಯ ಅಧ್ಯಯನ ನಡೆಸಲು ನೇಮಕಾತಿ ಮಾಡಲಾಗಿತ್ತು. ಅವರು ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಮತ್ತೆ ಸೇರ್ಪಡೆ ಮಾಡಲು ಶಿಫಾರಸು ಮಾಡಿ 2008ರಲ್ಲಿ ವರದಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಈವರೆಗೆ ಶಿಫಾರಸು ಜಾರಿಯಾಗಿಲ್ಲ.

ದ.ಕ. ಜಿಲ್ಲಾ ಕುಡುಬಿ ಪ್ರಧಾನ ಕಾರ್ಯದರ್ಶಿ ಶೇಖರ ಗೌಡ ಬಜ್ಪೆ , ಸಂಘಟನಾ ಕಾರ್ಯದರ್ಶಿ ಸುಂದರ ಗೌಡ ಕಡಂದಲೆ, ಜೊತೆ ಕಾರ್ಯದರ್ಶಿ ಸುರೇಶ್ ಕೊಂಪದವು, ಉಪಾಧ್ಯಕ್ಷ ಕೊರ್ಗ್ಯ ಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಹೇಮಚಂದ್ರ, ಕೋಶಾಧಿಕಾರಿ ರಾಮ ಗೌಡ, ವಿದ್ಯಾವೇದಿಕೆಯ ಸಂಚಾಲಕ ಉದಯ ಮಂಗಳೂರು, ರಾಜ್ಯ ಕಾರ್ಯದರ್ಶಿ ನಾರಾಯಣ ನಾಯ್ಕ್ಕ್ ಗೋಳಿಯಂಗಡಿ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ಕುಡುಬಿ ಸಮುದಾಯದ ಜಾನಪದ ಕಲೆಯಾದ ಗುಮ್ಮಟೆ, ಕೋಲಾಟ ತಂಡ ಈ ಜಾಥಾದಲ್ಲಿ ಭಾಗವಹಿಸಿತ್ತು. ಸುಮಾರು 2 ಸಾವಿರ ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು. ಜಾಥಾದ ಬಳಿಕ ಸಮುದಾಯದ ಧುರೀಣರು ದ.ಕ. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News