ವಕ್ಫ್ ಆಸ್ತಿ ವಿಚಾರವಾಗಿ ವಿಪಕ್ಷದಿಂದ ಅನಗತ್ಯ ಗೊಂದಲ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್

Update: 2024-11-05 13:28 GMT

ಮಂಗಳೂರು, ನ.5: ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸಹಿತ ಎಲ್ಲಾ ಸರಕಾರದ ಕಾಲದಲ್ಲೂ ನೋಟಿಸ್ ನೀಡಲಾಗಿದೆ. ಆದರೆ ವಿಪಕ್ಷವು ವಕ್ಫ್ ಆಸ್ತಿ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸಲು 2019ರಲ್ಲಿ ಬಿಜೆಪಿಯೇ ನೋಟಿಸ್ ಜಾರಿ ಮಾಡಿತ್ತು. ಅವರನ್ನು ಒಕ್ಕಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೂ ಕೂಡಾ ಬಿಜೆಪಿಯಾಗಿದೆ. ಈಗ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದೂ ಕೂಡ ಬಿಜೆಪಿ. ಇದೇ ಬಿಜೆಪಿಯ ನಿಜಬಣ್ಣವಾಗಿದೆ ಎಂದು ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವು ದಾಗಿ ಹೇಳಿದ್ದರು. ಈಗ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ. ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಎಚ್.ಡಿ. ಕುಮಾರಸ್ವಾಮಿ ಇದ್ದಾಗಲೂ ನೋಟಿಸ್ ಕೊಟ್ಟಿರುವುದು ಕೂಡಾ ಬಿಜೆಪಿಯ ಡಬ್ಬಲ್ ಗೇಮ್ ಆಗಿದೆ ಎಂದು ಪದ್ಮರಾಜ್ ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮುಸ್ಲಿಂ ಮುಖಂಡರ ಸಭೆಯಲ್ಲಿ ಎರಡು ಸಾವಿರ ಎಕರೆ ವಕ್ಫ್ ಆಸ್ತಿಯನ್ನು ಖಾಸಗಿಯವರು ಕಬಳಿಕೆ ಮಾಡಿದ್ದಾರೆ. ಅದನ್ನು ರಕ್ಷಿಸುವ ಜವಾಬ್ಧಾರಿ ಮುಖಂಡರ ಮೇಲಿದೆ ಎನ್ನುವ ಆಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಲಿ ಎಂದು ಪದ್ಮರಾಜ್ ಸವಾಲು ಹಾಕಿದ್ದಾರೆ.

ದ.ಕ.ಜಿಲ್ಲೆಯ ಕೆಲವು ಕಡೆ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂಬ ಸುಳ್ಳು ಮಾಹಿತಿಯು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ವಿಪಕ್ಷದ ನಾಯಕರು ಚುನಾವಣಾ ಸಂದರ್ಭ ಕೇವಲ ರಾಜಕೀಯ ದುರುದ್ದೇಶದಿಂದ ಇಂತಹ ವಿಷಯಗಳನ್ನು ಮುನ್ನಲೆಗೆ ತರುತ್ತಾರೆಯೇ ಹೊರತು ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಅವರು ಯೋಚಿಸುವುದಿಲ್ಲ. ಆದರೂ ವಕ್ಫ್ ಬೋರ್ಡ್ ಆಸ್ತಿ ವಿಚಾರವಾಗಿ ರೈತರಿಗೆ ಯಾವುದೇ ನೋಟಿಸ್ ನೀಡದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಕೊಟ್ಟಿರುವ ನೋಟಿಸನ್ನು ವಾಪಸ್ ಪಡೆಯಲು ಸೂಚಿಸಿ ದ್ದಾರೆ. ಆದಾಗ್ಯೂ ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಿ ಪ್ರತಿಭಟನೆ, ಹೋರಾಟ ಮಾಡುತ್ತಿರುವುದು ಕರ್ನಾಟಕದ ಉಪ ಚುನಾವಣೆ ಮತ್ತು ಮಹಾರಾಷ್ಟ್ರದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಗೊಂದಲ ಮೂಡಿ ಸುವ ಯತ್ನದ ಭಾಗವಾಗಿದೆ. ವಿಪಕ್ಷ ನಾಯಕರು ಇಂತಹ ಅನಗತ್ಯ ರಾಜಕೀಯ ದುರುದ್ದೇಶ ಹಾಗು ಗೊಂದಲ ಸೃಷ್ಟಿಸು ವುದನ್ನು ಬಿಟ್ಟು ರಾಜ್ಯ ಅಭಿವೃದ್ಧಿ ಕಡೆಗೆ ಗಮನ ನೀಡಲಿ ಎಂದು ಪದ್ಮರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News