ಆಯುಷ್ಮ್ಮಾನ್‌ ಭಾರತ್‌ಗೆ ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದ ಬೃಜೇಶ್‌ ಚೌಟ ಸೂಚನೆ

Update: 2024-11-05 14:19 GMT

ಮಂಗಳೂರು: ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಸೇರಿಸಬೇಕು ಎಂದು ಸಂಸದ ಬೃಜೇಶ್‌ ಚೌಟ ದ.ಕ. ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯಯೋಜನೆ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತುರ್ತು ಸಂದರ್ಭ ರೋಗಿ ಮತ್ತು ಕುಟುಂಬದವರಿಗೆ ಆಯುಷ್ಮಾನ್ ಭಾರತ್‌ನಡಿ ನೋಂದಣಿಯಾದ ಆಸ್ಪತ್ರೆಗಳನ್ನು ಹುಡುಕುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಸವಲತ್ತುಗಳು ಹಾಗೂ ಆಸ್ಪತ್ರೆಗಳ ಮಾಹಿತಿಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತಾಗಲು ಪ್ರತ್ಯೇಕ ಆ್ಯಪ್ ಸಿದ್ದಗೊಳಿಸಬೇಕು ಎಂದು ಸಂಸದರು ಸೂಚಿಸಿದರು.

ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳಿವೆ. ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ. ಆದರೆ ಆಯುಷ್ಮಾನ್ ಭಾರತ್ ಯೋಜನೆ ಯಡಿ ಚಿಕಿತ್ಸೆಗಳು ಪಡೆಯುವಲ್ಲಿ ಗೊಂದಲಗಳು ಉಂಟಾಗುತ್ತಿರುವುದು ವಿಷಾದಕರ ಎಂದು ಸಂಸದ ಬ್ರಿಜೇಶ್ ಚೌಟ ಅಸಮಾಧಾನ ವ್ಯಕ್ತಪಡಿಸಿದರು.

ಆಯುಷ್ಮಾನ್‌ನಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಭಿಸುವುದು, ರೋಗಿಗಳನ್ನು ಅಲೆದಾಡಿಸುವುದು, ಸರಕಾರಿ ಆಸ್ಪತ್ರೆಯ ಶಿಫಾರಸು ಪತ್ರ ನೀಡಲು ವಿಳಂಭಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಸೌಲಭ್ಯಗಳ ಕುರಿತು ಆರೋಗ್ಯ ಇಲಾಖೆ, ಆಸ್ಪತ್ರೆ ಮತ್ತು ರೋಗಿಗಳ ನಡುವೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಆಸ್ಪತ್ರೆಗಳಲ್ಲಿ 24 ಗಂಟೆಗಳ ಕಾಲವೂ ಆಯುಷ್ಮಾನ್ ಸೇವೆ ಲಭ್ಯವಿರಬೇಕು ಎಂದು ಸಂಸದ ಬ್ರಿಜೇಶ್ ಚೌಟ ಸೂಚಿಸಿದರು.

*ಎಪಿಎಲ್-ಆಯುಷ್ಮಾನ್ ನಿರಾಕರಿಸುವಂತಿಲ್ಲ

ಯಾವುದೇ ಆಸ್ಪತ್ರೆಗಳು ಎಪಿಎಲ್ ಕುಟುಂಬಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು.

ಆಯುಷ್ಮ್ಮಾನ್ ಭಾರತ್ ಯೋಜನೆಯಡಿ ಬಿಪಿಎಲ್ ಕುಟುಂಬದ ಸದಸ್ಯರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಎಪಿಎಲ್ ಕುಟುಂಬದವರಿಗೆ ಒಟ್ಟಾರೆ ಚಿಕಿತ್ಸೆ ವೆಚ್ಚದಲ್ಲಿ ಶೇ.30 ರಿಯಾಯಿತಿ ಪಡೆಯಲು ಅವಕಾಶ ಇದೆ. ಆದರೆ ಕೆಲವು ಆಸ್ಪತ್ರೆಗಳಲ್ಲಿ ಎಪಿಎಲ್ ಕುಟುಂಬದವರಿಗೆ ಆಯುಷ್ಮಾನ್ ಭಾರತ್ ಸವಲತ್ತು ನೀಡಲು ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಈ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಸಿದರು.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ ಆಗಸ್ಟ್ ತಿಂಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಿದ ಮೊತ್ತ 15.08 ಲಕ್ಷ ರೂ.ವನ್ನು ವಿವಿಧ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಕುಮಾರ್ ಮಾತನಾಡಿ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ನೀಡಲು ಅವಕಾಶ ಇಲ್ಲ. ಸಣ್ಣ ಕಾಯಿಲೆಗಳಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಶಿಫಾರಸ್ಸು ನೀಡಲು ಒತ್ತಡವಿದೆ. ಇದಕ್ಕೆ ನಿಯಮದಲ್ಲಿ ಅವಕಾಶವಿಲ್ಲ ಎಂದರು.

ಸಭೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News