ಶ್ರೀಕ್ಷೇತ್ರ ಸೋಮೇಶ್ವರ ವ್ಯವಸ್ಥಾಪನ ಸಮಿತಿ ಸದಸ್ಯ ಕಿಶೋರ್ ಉಚ್ಚಿಲ್ ಮೇಲೆ ಹಲ್ಲೆ ಖಂಡನೀಯ: ದಿನೇಶ್ ಕುಂಪಲ
ಉಳ್ಳಾಲ: ಸೋಮೇಶ್ವರ ಕಡಲ ಕಿನಾರೆಯಲ್ಲಿ ಅಕ್ರಮ ಮರಳು ಸಾಗಾಟ ವಿರೋಧಿಸುತ್ತಿದ್ದ ಶ್ರೀ ಕ್ಷೇತ್ರ ಸೋಮೇಶ್ವರದ ವ್ಯವಸ್ಥಾಪನ ಸಮಿತಿ ಸದಸ್ಯ ಕಿಶೋರ್ ಉಚ್ಚಿಲ್ ಅವರ ಮೇಲೆ ನಡೆದ ಹಲ್ಲೆ ಖಂಡನೀಯ. ಈ ಬಗ್ಗೆ ಪೊಲೀಸ್ ಇಲಾಖೆ, ಗಣಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಕುಂಪಲ ಒತ್ತಾಯಿಸಿದ್ದಾರೆ.
ಅವರು ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ಸೇವಾ ಸೌಧದಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಬೋವಿ ಸಮಾಜದ ಹಿರಿಯ ಮುಖಂಡ ಕಿಶೋರ್ ಅವರ ಮೇಲೆ ನಡೆದ ಹಲ್ಲೆಗೆ ಇನ್ನೂ ನ್ಯಾಯ ಸಿಗದಿರು ವುದು ದುರಂತವಾಗಿದ್ದು , ಹಲ್ಲೆ ಗೈದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ತಕ್ಷಣ ನ್ಯಾಯ ಒದಗಿಸಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದರು.
ಹಲ್ಲೆಗೈದಾತ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಇದು ಧರ್ಮ ವಿರೋಧಿ ಚಟುವಟಿಕೆ. ಮರಳು ದಂಧೆ ಯಿಂದ ಕಡಲ್ಕೊರೆತ ಸಹಿತ ಅಪಾಯ ಕಾರಿ ಘಟನೆ ಸಂಭವಿಸುತ್ತದೆ. ಇದರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಹಾಗೂ ಗಣಿ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಂಚಾರಿ ಪೊಲೀಸರು ಇತರ ಸಣ್ಣ ಪುಟ್ಟ ಅಪರಾಧ ಹಿಡಿಯುತ್ತಿದ್ದು ಅಕ್ರಮ ಮರಳು ಸಾಗಾಟದ ಲಾರಿಯ ಕುರಿತು ತಪಾಸಣೆ ಮಾಡುವುದು ನೆಪ ಮಾತ್ರವಾಗಿದೆ. ನ್ಯಾಯದ ಪರವಾಗಿ ಅವರು ಕಾರ್ಯ ನಿರ್ವಹಿಸುತ್ತಿಲ್ಲ . ಮರಳು ಸಾಗಾಟದ ಲಾರಿ ಪತ್ತೆ ಹಚ್ಚುವ ಕಾರ್ಯ ಅವರು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಸೋಮೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸೋಮೇಶ್ವರ ದೇವಸ್ಥಾನ ಟ್ರಸ್ಟೀ ದೀಪಕ್ ಪಿಲಾರ್, ಸುಂದರ್ ಚೆಂಬುಗುಡ್ಡೆ, ನಾಮ ನಿರ್ದೇಶಿತ ಸದಸ್ಯ ಪ್ರೇಮ್ ಹಾಗೂ ರಕ್ಷಿತ್ ಕುಂಪಲ ಉಪಸ್ಥಿತರಿದ್ದರು.