ಪ್ರೆಸ್ ಕ್ಲಬ್ ಉಳ್ಳಾಲ ವತಿಯಿಂದ ಸೌಹಾರ್ದ ದೀಪಾವಳಿ ಕಾರ್ಯಕ್ರಮ

Update: 2024-11-06 07:33 GMT

ಉಳ್ಳಾಲ:ಪ್ರೆಸ್ ಕ್ಲಬ್ ಉಳ್ಳಾಲ ನೇತೃತ್ವದಲ್ಲಿ ನಡೆದ ತಿಂಗಳ ಬೆಳಕು- ಸೌಹಾರ್ದ ದೀಪಾವಳಿ ಕಾರ್ಯಕ್ರಮದಲ್ಲಿ ಹೊರನಾಡ ಕನ್ನಡಿಗ, ಸಮಾಜಸೇವಕ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನ ಮನೆ, ಇಸ್ಮಾಯಿಲ್ ಕಣಂತೂರು ಬಾಳೆಪಪುಣಿ, ರೀಚಲ್ ಫೌಂಡೇಷನ್ ಸ್ಥಾಪಕಾಧ್ಯಕ್ಷ ಸಿರಿಲ್ ರಾಬರ್ಟ್ ಡಿಸೋಜ ಸೇರಿದಂತೆ ಮೂವರು ಸಾಧಕರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ ಮಾತನಾಡಿ, ನಂಬಿಕೆಯ ಕ್ರಿಯಾತ್ಮಕ ರೂಪವೇ ಆಚರಣೆ . ನಂಬಿಕೆಯ ನೆಲಗಟ್ಟಿನಲ್ಲಿ ಹಬ್ಬಗಳ ಆಚರಣೆಗಳು ನೆಲೆನಿಂತಿದೆ. ಮತಗಳ ಮಾತ್ರ ಬೇರೆಯಾದರೂ ಧರ್ಮ ಒಂದೇ ಆಗಿದೆ. ಆಧುನಿಕವಾಗಿ ಸಮಾಜ ಬೆಳೆಯುತ್ತಿದ್ದರೂ ಆತ್ಮಜ್ಞಾನ ಅನ್ನುವಂತದ್ದು ಬೆಳೆದಿಲ್ಲ, ಅಂತರಂಗ ಸಂಸ್ಕಾರ ಬೆಳೆಯಬೇಕಿದೆ. ವೈಜ್ಞಾನಿಕತೆಯಿಂದ ಸಾಧ್ಯವಿಲ್ಲ. ಒಳ್ಳೆಯ ಮನಸ್ಸಿನಿಂದ ಸಾಧ್ಯ. ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಹಬ್ಬದಾಚರಣೆಯಲ್ಲಿ ಸಾಧಕರನ್ನು ಗುರುತಿಸುವ ಕಾರ್ಯ ಸಂಸ್ಕಾರಯುತ ಕಾರ್ಯಕ್ರಮವಾಗಿದೆ ಎಂದರು.

ಗೌರವ ಸ್ವೀಕರಿಸಿದ ಪ್ರವೀಣ್ ಶೆಟ್ಟಿ ಮೇಗಿನಮನೆ ಮಾತನಾಡಿ, ಸಮಾಜದಿಂದ ಯಾವುದನ್ನೂ ನಿರೀಕ್ಷಸದೆ ಸೇವೆಯನ್ನು ನಡೆಸುತ್ತಾ ಬಂದಿರುವೆನು. ಸರಳತೆಯಿಂದ ಬದುಕುವುದಷ್ಟೇ ನನ್ನ ಕನಸು. ಜನರ ನಡುವೆ ಗುರುತಿಸಬೇಕು ಎಂದು ಸಹಾಯ ಮಾಡಿದವನಲ್ಲ. ಮಕ್ಕಳಿರುವಾಗ ಬಹಳಷ್ಟು ಕಷ್ಟದ ದಿನಗಳಾಗಿತ್ತು. ಅದೇ ಪ್ರೇರಣೆಯಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ನೆಮ್ಮದಿ ಆರೋಗ್ಯವನ್ನು ಕಂಡಿದ್ದೇನೆ. ಕೊರೊನಾ ಸಂದರ್ಭದಲ್ಲಿ ಬಿಲ್ ಪಾವತಿಸಲು ಅಸಾಧ್ಯವಾಗಿ ಆಸ್ಪತ್ರೆಯಲಿ ಬಾಕಿಯುಳಿದಿದ್ದವರನ್ನು ಪತ್ರಕರ್ತರ ಮಾಹಿತಿಯಿಂದ ಬಿಡುಗಡೆಗೊಳಿಸಿದ್ದೇನೆ. ಸಮಾಜಸೇವೆಗೆ ಪತ್ರಕರ್ತರೇ ಸ್ಪೂರ್ತಿಯಾಗಿದ್ದಾರೆ ಎಂದರು.

ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ, ಸಮಾಜಸೇವೆಗೆ ತಾಯಿಯೇ ಪ್ರೇರಣೆ. ನೇರ ನಡೆ, ನುಡಿ ವ್ಯಕ್ತಿತ್ವವನ್ನು ಜೀವನದಲ್ಲಿ ಅನುಸರಿಸುತ್ತಾ, ಗ್ರೂಪ್ ಡಿಸರಕಾರಿ ನೌಕರನಾಗಿದ್ದರೂ, ಕೆಲಸದ ಬಹುಪಾಲು ಸಮಾಜಸೇವೆಯಲ್ಲಿ ಮೀಸಲಿಟ್ಟಿದ್ದೆನು. ಇದೀಗ ನಿವೃತ್ತನಾದ ನಂತರವೂ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಅಶಕ್ತರ ಧ್ವನಿಯಾಗಲು ಬಯಸಿದ್ದೇನೆ. ಶಿವಾಜಿ ಫ್ರೆಂಡ್ಸ್ ಕ್ಲಬ್ ಸಂಘ ತನ್ನ ಬೆನ್ನೆಲುಬಾಗಿ ನಿಂತು ಕ್ರೀಡೆಯಲ್ಲಿ, ತೊಡಗಿಸಿಕೊಳ್ಳಲು ಸಹಕಾರಿಯಾಯಿತು. ಕಬ್ಬಡ್ಡಿ ಪಂದ್ಯಾಟವನ್ನು ಆಯೋಜಿಸುತ್ತಾ ಯುವಕರಲ್ಲಿ ಕ್ರೀಡಾಸ್ಪೂರ್ತಿ ತುಂಬಲು ಸಂಘದ ಜತೆಗೆ ಪತ್ರಕರ್ತರ ಪಾತ್ರವೂ ಮಹತ್ವದ್ದಾಗಿದೆ ಎಂದರು.

ಸಮಾಜಸೇವಕ ಇಸ್ಮಾಯಿಲ್ ಕಣಂತೂರು ಬಾಳೆಪುಣಿ ಮಾತನಾಡಿ, ಗುಜಿರಿ ವ್ಯಾಪಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಫಲವಾಗಿ ಇಂದು 5 ಕ್ಕೂ ಹೆಚ್ಚಿನ ದೇಶದವರು ಮನೆಗೆ ಬಂದು ಸಂದರ್ಶನ ಪಡೆದುಕೊಂಡಿದ್ದಾರೆ. ಆಂಗ್ಲಭಾಷೆ ಗೊತ್ತಿಲ್ಲದೇ ಇದ್ದರೂ ಒಂಬುಡ್ಸ್ ಮೆನ್ ಸಹಾಯದಿಂದ ಅರ್ಥವನ್ನು ಮಾಡಿಕೊಂಡಿದ್ದೇನೆ. ಕಳೆದುಹೋದ ಚಿನ್ನ, ಕಳವು ನಡೆಸಿದ ಆರೋಪಿಗಳ ಹುಡುಕಾಡುವಲ್ಲಿ, ಅಪಘಾತದ ಸಂದರ್ಭ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಗುಜರಿ ವ್ಯಾಪಾರದೊಂದಿಗೆ ನಿರಂತರವಾಗಿ ನಡೆಸುತ್ತಾ ಬಂದಿರುವೆ. ಬಹುಮುಖ್ಯವಾಗಿ ಪ್ಲಾಸ್ಟಿಕ್ ವಿರೋಧಿ ಆಂದೋಲನದಲ್ಲಿ ಜನಶಿಕ್ಷಣ ಟ್ರಸ್ಟ್ ಜೊತೆಗೆ ಕೈಜೋಡಿಸಿರುವ ನಾನು, ಗುಜರಿ ಹೆಕ್ಕಲು ಮನೆಗಳಿಗೆ ತೆರಳುವ ಸಂದರ್ಭ ಪ್ರತೀ ಮನೆಗಳಲ್ಲಿ ಪ್ಲಾಸ್ಟಿಕ್ ಉರಿಸದಂತೆ, ಉಪಯೋಗಿಸದಂತೆ, ಉಪಯೋಗಿಸಿದ ಪ್ಲಾಸ್ಟಿಕ್ ಅನ್ನು ಸಮರ್ಪಕವಾಗಿ ಜೋಡಿಸಿ ಕಸವಿಲೇವಾರಿ ನಡೆಸುವಂತೆ ಒತ್ತಾಯಿಸುತ್ತಾ ಬಂದಿರುವೆನು ಎಂದರು.

ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಬಶೀರ್ ಕಲ್ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ನಿರೂಪಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಸತೀಶ್ ಪುಂಡಿಕಾಯಿ, ಉಪಾಧ್ಯಕ್ಷ ಆರೀಫ್ ಯು.ಆರ್, ಕಾರ್ಯದರ್ಶಿ ಸತೀಶ್ ಕೊಣಾಜೆ ಅತಿಥಿಗಳ ಪರಿಚಯ ಮಾಡಿದರು. ವಜ್ರ ಗುಜರನ್ ವಂದಿಸಿದರು

ಪತ್ರಕರ್ತರಾದ ಸುಪ್ರೀತ್ ಭಂಡಾರಿ, ಆಸೀಫ್ ಬಬ್ಬುಕಟ್ಟೆ, ಶಿವಶಂಕರ್, ಮೋಹನ್ ಕುತ್ತಾರ್, ಅನ್ಸಾರ್ ಇನೋಳಿ, ಅಶ್ವಿನ್ , ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News