ಡಾ.ಅಂಬೇಡ್ಕರ್ ವಿರುದ್ಧ ಅವಮಾನಕಾರಿ ವೀಡಿಯೊ ವೈರಲ್ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ದಲಿತ ನಾಯಕರ ಆಗ್ರಹ

Update: 2024-02-28 10:45 GMT

ಮಂಗಳೂರು, ಫೆ. 28: ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಮಾನಕಾರಿ ರೀತಿಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದ್ದು, ತಪ್ಪು ಮಾಹಿತಿ ಪ್ರಚಾರ ಮಾಡಲಾಗುತ್ತಿದೆ. ಈ ರೀತಿ ಅವಮಾನವನ್ನು ಸಹಿಸಲಾಗದು. ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ದಲಿತರ ಕುಂದುಕೊರತೆ, ಅಹವಾಲು ಸ್ವೀಕಾರ ಸಭೆಯಲ್ಲಿ ದಲಿತ ನಾಯಕ ಶೀನ ಮಾಸ್ತಿಕಟ್ಟೆ ಈ ಪ್ರಕರಣವನ್ನು ಪ್ರಸ್ತಾಪಿಸಿದರು.

ವ್ಯಕ್ತಿಯೊಬ್ಬರು ವೀಡಿಯೊವೊಂದರಲ್ಲಿ ಡಾ.ಅಂಬೇಡ್ಕರ್ ಸಂವಿಧಾನ ರಚಿಸಿದವರಲ್ಲ. ಬೆನೆಗಲ್ ನರಸಿಂಹ ರಾವ್ ಸಂವಿಧಾನ ರಚಿಸಿರುವುದಾಗಿ ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದಲಿತ ನಾಯಕರು ಮಂಗಳೂರು ನಗರ ಠಾಣೆಯಲ್ಲಿ ದೂರು ನೀಡಿ 15 ದಿನಗಳು ಕಳೆದರೂ ಕ್ರಮ ಆಗಿಲ್ಲ. ಇದು ಬಹುದೊಡ್ಡ ಅಪರಾಧವಾಗಿದ್ದು, ತಕ್ಷಣ ಈ ಬಗ್ಗೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ದಲಿತ ನಾಯಕರಾದ ಎಸ್.ಪಿ.ಆನಂದ ಹಾಗೂ ಇನ್ನಿತರರು ಕೂಡಾ ದನಿಗೂಡಿಸಿದರು.

ಸುಳ್ಯ ಅಂಬೇಡ್ಕರ್ ಭವನ ಪೂರ್ಣವಾಗಿಲ್ಲ

ಸುಳ್ಯದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಕಳೆದ ಸುಮಾರು ಒಂಭತ್ತು ವರ್ಷಗಳಿಂದ ಪೂರ್ಣಗೊಂಡಿಲ್ಲ. ವಿಟ್ಲದಲ್ಲಿ ಒಂದು ಕೋಟಿ ರೂ. ನೀಡಿದರೂ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿ ಆರಂಭಿಸಲಾಗಿಲ್ಲ. ಪುತ್ತೂರಿನಲ್ಲಿ 75 ಸೆಂಟ್ಸ್ ಜಾಗ ಮೀಸಲಿಟ್ಟಿದ್ದರೂ ಭವನ ನಿರ್ಮಾಣ ಆಗಿಲ್ಲ ಎಂದು ದಲಿತ ನಾಯಕ ಧರ್ಣಪ್ಪ ಆಕ್ಷೇಪಿಸಿದರು.

ನಗರದಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿ ಬದಲಾವಣೆ ಮಾಡುವಂತೆ ಕಾರ್ಪೊರೇಟರ್ ಒಬ್ಬರು ತಮ್ಮ ಮೇಲೆ ಒತ್ತಡ ಹೇರಿದ್ದರ ಬಗ್ಗೆ ಠಾಣೆಗೆ ದೂರು ದಾಖಲಿಸಿದ್ದು, ಈ ಬಗ್ಗೆ ಸಂಬಂಧಪಟ್ಟವರ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರ ಕ್ರಮಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅಮಲಜ್ಯೋತಿ ಹೇಳಿದರು.

ಪೊಕ್ಸೋ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಪೊಕ್ಸೋ ಕಾಯ್ದೆಯಡಿ ಬಂಧಿಸಲ್ಪಟ್ಟವರ ಮೇಲಾಗುವ ಕಾನೂನು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಆ ಮೂಲಕ ಪೊಕ್ಸೋ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ದಲಿತ ನಾಯಕಿ ಈಶ್ವರಿ ಆಗ್ರಹಿಸಿದರು.

ಕೋಳಿ ಅಂಕದ ನೆಪದಲ್ಲಿ ಜೂಜು

ಮಂಗಳೂರು ನಗರದಲ್ಲೂ ಒಂದು ದಿನದ ಕೋಳಿ ಅಂಕಕ್ಕೆ ಅನುಮತಿ ಪಡೆದು ಒಂದು ವಾರಕ್ಕೂ ಅಧಿಕ ಸಮಯ ಜೂಜಿಗಾಗಿ ಕೋಳಿ ಅಂಕ ಮುಂದುವರಿಯುತ್ತಿದೆ. ಇದರಿಂದ ಶಾಲಾ-ಕಾಲೇಜು ಮಕ್ಕಳು ಕೂಡಾ ತಪ್ಪುದಾರಿಗೆ ತಳ್ಳಲ್ಪಡುತ್ತಿದ್ದು, ಯುವಕರು ಕೆಲಸಕ್ಕೆ ಹೋಗದೆ ಜೂಜಿನಲ್ಲಿ ಭಾಗಿಯಾಗಿ ತಮ್ಮ ಕುಟುಂಬದ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ. ಬಡ ದಲಿತ ಕುಟುಂಬಗಳ ಮಕ್ಕಳು, ಯುವಕರೇ ಈ ಜೂಜಿನ ಬಲಿಪಶುಗಳು ಎಂಬ ಆರೋಪ ದಲಿತ ಮುಖಂಡರಿಂದ ವ್ಯಕ್ತವಾಗಿದೆ.

ದಲಿತ ಮುಖಂಡ ಸದಾಶಿವ ಉರ್ವಾಸ್ಟೋರ್ ಅವರು ಈ ಆರೋಪ ಮಾಡಿದಾಗ, ಎಸ್ಪಿ ಆನಂದ್ ಅವರೂ ದನಿಗೂಡಿಸಿದರು.

ಸಾಂಪ್ರದಾಯಿಕವಾಗಿ ಒಂದು ದಿನಕ್ಕೆ ನಡೆಯುವ ಕೋಳಿ ಅಂಕದ ಬಗ್ಗೆ ನಮ್ಮ ಯಾವುದೇ ಆಕ್ಷೇಪ ಇಲ್ಲ. ಆದರೆ , ಈ ರೀತಿ ಅನುಮತಿಪಡೆದು ವಾರಗಟ್ಟಲೆ ಕೋಳಿ ಅಂಕ ಜೂಜು ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಸ್ಪಷ್ಟ ಆದೇಶ ಹೊರಡಿಸಿದ್ದರೂ ಪಾಲನೆಯಾಗುತ್ತಿಲ್ಲ. ಕೂಲಿ ಕೆಲಸಬಿಟ್ಟು, ಶಾಲಾ ಕಾಲೇಜಿಗೆ ರಜೆ ಹಾಕಿ ಈ ಜೂಜಿನಲ್ಲಿ ಭಾಗಿಯಾಗುತ್ತಿರುವುದು ಕಂಡು ಬರುತ್ತಿದೆ ಎಂದು ದೂರಿದರು.

ತ್ಯಾಜ್ಯ ನಿರ್ವಹಣಾ ವಾಹನ ಚಾಲಕಿ ಹುದ್ದೆಯಿಂದ ತೆರವು: ಆಕ್ಷೇಪ

ಪದವಿ ಶಿಕ್ಷಣ ಹೊಂದಿರುವ ದಲಿತ ಯುವತಿಯೊಬ್ಬರು ಪುತ್ತೂರಿನ ಬಲ್ನಾಡು ಗ್ರಾಪಂನ ತ್ಯಾಜ್ಯ ನಿರ್ವಹಣಾ ವಾಹನದ ಚಾಲಕಿಯಾಗಿ ಕೆಲಸ ಮಾಡುತ್ತಿದ್ದು, ಅಲ್ಲಿನ ಪಂಚಾಯತ್ನ ಅಧ್ಯಕ್ಷರು ಹಾಗೂ ಇತರ ಮೇಲ್ವರ್ಗದವರು ಮಾನಸಿಕ ಕಿರುಕುಳ ನೀಡಿ ಹುದ್ದೆಯಿಂದ ತೆರವುಗೊಳಿಸಿದ್ದಾರೆ. ಈ ಬಗ್ಗೆ ಸಿಆರ್ ಸೆಲ್ಗೆ ದೂರು ನೀಡಿ ಮೂರು ತಿಂಗಳಾದರೂ ಕ್ರಮ ಆಗಿಲ್ಲ ಎಂದು ಎಸ್ಪಿ ಆನಂದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ಗಣಿಗಾರಿಕೆ ಆರೋಪ

ಮುಲ್ಕಿಯ ಐಕಳ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಮನೆಗಳಲ್ಲಿ ಬಿರುಕು ಬಿಟ್ಟಿವೆ. ದೂರು ನೀಡಿದರೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ರಾತಿ ಹೊತ್ತು ಇಲ್ಲಿಂದ ಲಾರಿಗಳಲ್ಲಿ ಜಲ್ಲಿ ಸಾಗಾಟ ನಡೆಯುತ್ತಿದೆ ಎಂದು ರಾಮಚಂದ್ರ ಎಂಬವರು ಆರೋಪಿಸಿದರು.

ಇನ್ನೂ ಆಗದ ಅಂಬೇಡ್ಕರ್ ವೃತ್ತ: ಆಕ್ಷೇಪ

ಮಂಗಳೂರು ನಗರ ಪಾಲಿಕೆಗೆ ಡಾ.ಅಂಬೇಡ್ಕರ್ ಬಗ್ಗೆ ತಾತ್ಸಾರ ಮನೋಭಾವ ಯಾಕೆ ಎಂದು ತಿಳಿಯುತ್ತಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣದ ಬಗ್ಗೆ ಕಳೆದ ಎರಡು ವರ್ಷಗಳಿಂದಲೂ ತಾತ್ಸಾರ ತೋರಲಾಗುತ್ತಿದೆ. ಪ್ರತಿ ಸಭೆಯಲ್ಲೂ ಈ ಬಗ್ಗೆ ದೂರು ನೀಡುತ್ತಿದ್ದರೂ, ಆಗುತ್ತಿಲ್ಲ. 98 ಲಕ್ಷ ರೂ. ವೃತ್ತಕ್ಕಾಗಿ ಮೀಸಲಿಟ್ಟಿರುವುದಾಗಿ ಹೇಳಲಾಗಿದೆ. ಆ ಹಣ ಎಲ್ಲಿಗೆ ಹೋಗಿದೆ. ಕಳೆದ ಎರಡು ವರ್ಷದಿಂದೀಚೆಗೆ ನಗರದಲ್ಲಿ ಹಲವು ವೃತ್ತಗಳಾಗಿವೆ. ಆದರೆ ಹೃದಯ ಭಾಗದಲ್ಲಿ ಅಂಬೇಡ್ಕರ್ ಪುತ್ಥಳಿಯೊಂದಿಗೆ ವೃತ್ತ ನಿರ್ಮಾಣ (ನಗರದ ಜ್ಯೋತಿ ಸರ್ಕಲ್ ಬಳಿ) ಮಾತ್ರ ಇನ್ನೂ ಆಗಿಲ್ಲ. ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ದಲಿತ ನಾಯಕ ಧರ್ಣಪ್ಪ, ಸದಾಶಿವ, ಎಸ್.ಪಿ. ಆನಂದ ಮೊದಲಾದವರು ಎಚ್ಚರಿಸಿದರು.

ಸಭೆಯಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ ಉಪಸ್ಥಿತರಿದ್ದು, ಸಭೆಯಲ್ಲಿ ಪ್ರಸ್ತಾಪವಾದ ದೂರುಗಳ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News