ಉಳ್ಳಾಲ ನಗರ ಸಭೆಯಲ್ಲಿ ಸಾಮಾನ್ಯ ಸಭೆ: ಕೋಲಾಹಲ ಸೃಷ್ಟಿಸಿದ ತಗಡು ಶೀಟ್ ವಿವಾದ

Update: 2024-11-12 17:39 GMT

ಉಳ್ಳಾಲ: ಶಿಥಿಲಗೊಂಡ ಗ್ರಂಥಾಲಯ ನೆಲಸಮಗೊಳಿಸಿದ್ದ ಸಂದರ್ಭ ದ್ವಿಚಕ್ರ ವಾಹನ ಪಾರ್ಕಿಂಗ್ ಗಾಗಿ ಅಳವಡಿಸಲಾ ಗಿದ್ದ ಸಿಲಿಕಾನ್ ಶೀಟ್ ಕೆಡವಿ ಕೊಂಡೊಯ್ದ ಬಗ್ಗೆ ನಗರಸಭೆಯಲ್ಲಿ ಪ್ರಸ್ತಾಪಗೊಂಡು ಕೋಲಾಹಲ ಸೃಷ್ಟಿಯಾದ ಘಟನೆ ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಎಸ್ಡಿಪಿಐ ಸದಸ್ಯರು ಶೀಟ್ ಕಳ್ಳತನದ ಬಗ್ಗೆ ಪ್ರಸ್ತಾಪಿಸಿ ಅಧ್ಯಕ್ಷರನ್ನು ತರಾಟೆಗೈದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತರು ಗ್ರಂಥಾಲಯ ನೆಲಸಮಗೊಳಿಸಿದ್ದ ಗುತ್ತಿಗೆದಾರರು ತಪ್ಪಿ ತಗಡು ಶೀಟ್ ಕೊಂಡು ಹೋಗಿದ್ದರು. ಇದೀಗ ಅದನ್ನು ವಾಪಸ್ ತಂದಿಟ್ಟಿದ್ದಾರೆ. ತಗಡು ಶೀಟ್ ಕೊಂಡು ಹೋಗಲು ನಾನು ಯಾರಿಗೂ ಹೇಳಲಿಲ್ಲ ಎಂದು ಸಭೆಗೆ ತಿಳಿಸಿದರು. ಇದರಿಂದ ಆಕ್ರೋಶ ಗೊಂಡ ವಿರೋಧ ಪಕ್ಷದ ಸದಸ್ಯರು ಟೇಬಲ್ ಮುಂಭಾಗ ಜಮಾಯಿಸಿ ಪ್ರತಿಭಟಿಸಿದಲ್ಲದೇ ಸಭಾಧ್ಯಕ್ಷರು, ಪೌರಾಯುಕ್ತರಲ್ಲಿ ಸದನ ಸಮಿತಿ ರಚಿಸಿ ಈ ಪ್ರಕರಣದ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ನಗರಸಭೆ ಹಿರಿಯ ಸದಸ್ಯ ದಿನಕರ ಉಳ್ಳಾಲ್ ಅವರು ನಗರಸಭೆಯ ಸೊತ್ತುಗಳನ್ನು ಸಂರಕ್ಷಿಸುವುದು ಪೌರಾಯುಕ್ತರ ಜವಾಬ್ದಾರಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಆಗಬೇಕು. ತಪ್ಪು ಮಾಡಿದವರ ವಿರುದ್ಧ ನಗರಸಭೆ ಅಧಿಕಾರಿಗಳಿಗೆ ಪೊಲೀಸ್ ದೂರು ನೀಡಲು ಅವಕಾಶವಿದೆ. ಆದರೂ ನೀಡಿಲ್ಲ ಯಾಕೆ? ಗ್ರಂಥಾಲಯದ್ದು ಎಂದು ಗ್ರಹಿಸಿ ತಪ್ಪಿ ಕೊಂಡು ಹೋದ ನಗರ ಸಭೆಯ ಸೊತ್ತು ವಾಪಸ್ ತಂದಿಡಲು ಇಷ್ಟು ದಿನ ಬೇಕೇ ಎಂದು ಪ್ರಶ್ನಿಸಿದರು.

ಈ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತೇಜೋ ಮೂರ್ತಿ ಸಭೆಗೆ ತಿಳಿಸಿದರು.

ಸಭೆಗೆ ಪಿಡಬ್ಲ್ಯುಡಿ ಅಧಿಕಾರಿಗಳು ನಿರಂತರ ಗೈರಾಗುತ್ತಿರುವ ಬಗೆ ಆಕ್ರೋಶ ವ್ಯಕ್ತಪಡಿಸಿದ ಕೌನ್ಸಿಲರ್ ಜಬ್ಬಾರ್ ಅವರು, ಪಿಡಬ್ಲ್ಯುಡಿ ಅಧಿಕಾರಿಗಳು ಗೈರಾಗಲು ಕಾರಣ ತಿಳಿಸಬೇಕು. ಅವರು ಗೈರಾದರೆ ರಸ್ತೆ ಬಗೆ ಯಾರಲ್ಲಿ ಚರ್ಚಿಸಬೇಕು? ಮಾಸ್ತಿ ಕಟ್ಟೆ ರಸ್ತೆ ಬಗೆ ದೊಡ್ಡ ಸಮಸ್ಯೆಯೇ ಇದೆ.ಇದನ್ನು ಯಾರ ಬಳಿ ಹೇಳಬೇಕು ಎಂದು ಸಭೆಯಲ್ಲಿ ಪ್ರಶ್ನಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ದಿನಕರ್ ಉಳ್ಳಾಲ ಅವರು, ರಸ್ತೆಯಲ್ಲಿ ಹೊಂಡಗಳು ತುಂಬಿವೆ. ಮೊನ್ನೆ ಹೊಂಡ ದಿಂದ ಒಂದು ಜೀವ ಹೋಗಿದೆ. ಇದರ ಬಳಿಕ ಹೊಂಡ ಮುಚ್ಚುವ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆದಿದೆ. ಮೊನ್ನೆ ನಡೆದ ಘಟನೆ ಬಗೆ ಈ ಪ್ರಶ್ನೆ ಕೇಳಬಹುದು ಎಂದು ಹೆದರಿ ಅವರು ಬರಲಿಲ್ಲ ಅಷ್ಟೇ. ಅವರನ್ನು ಬರಿಸುವ ಜವಾಬ್ದಾರಿ ನಗರ ಸಭೆಯದ್ದಲ್ಲವೇ ಎಂದು ಪ್ರಶ್ನಿಸಿದ ಅವರು ಚೆಂಬುಗುಡ್ಡೆಯಲ್ಲಿ ಮಣ್ಣು ಜರಿಯುತ್ತಿದೆ. ಮರ ಬೀಳುವ ಹಂತದಲ್ಲಿಲದೆ. ರಸ್ತೆ ದುರಸ್ತಿ ಪಿಡಬ್ಲ್ಯುಡಿ ಅಧಿಕಾರಿಗಳು ಮೊದಲೇ ಮಾಡಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದರು.

ಕುಡಿಯುವ ನೀರು ಮತ್ತು ಒಳಚರಂಡಿ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದ ಒಳಚರಂಡಿ ಮಂಡಳಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶೋಭಾ ಅವರು ನಗರೊತ್ಥಾನ ಯೋಜನೆ ಯಡಿ ರಸ್ತೆ ಹಾಗೂ ನೀರಿನ ಪೈಪ್ ಲೈನ್ ಕಾಮಗಾರಿ ಮಾಡಲಾಗುತ್ತಿದೆ. ಒಳಚರಂಡಿ ಕಾಮಗಾರಿಗೆ ವ್ಯಾಪಕ ಆಕ್ಷೇಪ ಇರುವುದರಿಂದ ತಟಸ್ಥ ಗೊಂಡಿದೆ ಎಂದು ಹೇಳಿದರು.

ಈ ವೇಳೆ ಪ್ರತಿಕ್ರಿಯಿಸಿದ ದಿನಕರ್ ಉಳ್ಳಾಲ ಅವರು ಮೊದಲು ನೀರಿನ ಪೈಪ್ ಲೈನ್ ಕಾಮಗಾರಿ ಮಾಡಿ. ಇದರ ಬಳಿಕ ನಗರೊತ್ಥಾನ ಕೆಲಸ ಮಾಡಿ. ಒಳಚರಂಡಿ ಕಾಮಗಾರಿ ಮಾಡುತ್ತೇವೆ ಎಂದು ಹೇಳಿ ವರ್ಷ 12 ಉರುಳಿದೆ. ಅದಿನ್ನು ಆಗಿಲ್ಲ. ಕೇಳಿದರೆ ಆಕ್ಷೇಪ ಇದೆ ಎಂದು ಹೇಳಿ ಮೌನ ಆದರೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶೋಭಾ ಅವರು ಒಳಚರಂಡಿ ಕಾಮಗಾರಿಗೆ ಎರಡು ಜಾಗ ಕೋರ್ಟ್ ನಲ್ಲಿ ಇದೆ. ತೊಕ್ಕೊಟ್ಟು, ಬಂಡಿಕೊಟ್ಯದಲ್ಲಿ ಕೆಲಸ ಆರಂಭ ಆಗಿದೆ ಎಂದರು.

ಈ ಸಂದರ್ಭ ಮೊಹಮ್ಮದ್ ಮುಕಚೇರಿ ಮಾತನಾಡಿ, ಕುಡಿಯುವ ನೀರಿಲ್ಲ ಎಂದು ‌ಹೋರಾಟವೇ ನಡೆಯುತ್ತದೆ. ಬ್ಯಾನರ್ ಹಾಕಿ ಪ್ರತಿಭಟನೆ ಮಾಡುತ್ತಾರೆ. ಮೊದಲು ನೀರಿನ ಪೈಪ್ ಲೈನ್ ಕಾಮಗಾರಿ ಮುಗಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ಸಭೆಯ ಕಾರ್ಯಸೂಚಿ ಪಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದಾಗ ಪರ ವಿರೋಧ ಚರ್ಚೆಗಳು ನಡೆಯಿತು. ನಿರ್ವಹಣೆ ಕಾಮಗಾರಿ ಯ ಟೆಂಡರ್ ಅನುಮೋದನೆ ಮಾಡುವ ಬಗೆ ಸಭೆಯಲ್ಲಿ ಪ್ರಸ್ತಾಪ ಗೊಂಡ ಸಂದರ್ಭದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಪೌರಾಯುಕ್ತ ಮತಡಿ ಅವರು ನಿರ್ವಹಣೆ ಕಾಮಗಾರಿ ಗೆ ಕರೆದ ಟೆಂಡರ್ ರದ್ದು ಮಾಡಿ ಮೂರು ತಿಂಗಳ ಬಳಿಕ ಹೊಸದಾಗಿ ಟೆಂಡರ್ ಕರೆಯಲಾಗುವುದು ಎಂದು ಸಭೆಗೆ ತಿಳಿಸಿದರು.

ಪ್ರತಿ ಲೋಡ್ ಗೆ 9000 ರೂ.ನಂತೆ ವ್ಯಕ್ತಿ ಯೊಬ್ಬರು ತ್ಯಾಜ್ಯ ವಿಲೇವಾರಿ ಮಾಡುವುದನ್ನು ಮುಂದುವರಿಸುವ ಬಗ್ಗೆ ಸಭೆ ಯಲ್ಲಿ ಪ್ರಸ್ತಾಪಗೊಂಡಾಗ ಅವರು ಕಸ ಎಲ್ಲಿಗೆ ಕೊಂಡು ಹೋಗುತ್ತಾರೆ ಎಂದು ನೋಡಬೇಕಾಗಿದೆ. ಇದರಿಂದ ಸಮಸ್ಯೆ ಆಗಬಾರದು. ಹೊಸದಾಗಿ ತಾಜ್ಯ ವಿಲೇವಾರಿ ಘಟಕ ನಮಗೆ ಆಗಬೇಕು ಎಂದು ಸಭೆಯಲ್ಲಿ ದಿನಕರ್ ಉಳ್ಳಾಲ ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ನಗರಸಭೆ ನಾಮನಿರ್ದೇಶನ ಸದಸ್ಯ ಹುಸೈನ್ ಕುಂಞಿ ಮೋನು ಹಾಗೂ ಬಿಜೆಪಿ ಕೌನ್ಸಿಲರ್ ಗೀತಾ ಬಾಯಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಸಪ್ನಾ ಹರೀಶ್, ಪ್ರಭಾರ ಪೌರಾಯುಕ್ತ ಮತಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತೇಜೋಮೂರ್ತಿ ಉಪಸ್ಥಿತರಿದ್ದರು.

"ಗ್ರಂಥಾಲಯ ನೆಲಸಮಗೊಳಿಸಿದ್ದ ಸಂದರ್ಭ ಗುತ್ತಿಗೆ ವಹಿಸಿಕೊಂಡ ವ್ಯಕ್ತಿ ಅದರ ಸೊತ್ತು ಕೊಂಡು ಹೋಗಿದ್ದರು. ಈ ವೇಳೆ ನಗರಸಭೆಯ ತಗಡು ಶೀಟ್ ಗ್ರಂಥಾಲಯ ಕಟ್ಟಡದ್ದೇ ಎಂದು ಭಾವಿಸಿಕೊಂಡು ಹೋಗಿದ್ದರು. ಕೊಂಡು ಹೋಗಲು ನಾನು ಹೇಳ್ಲಿಲ್ಲ. ಅವರು ತಗಡು ಶೀಟ್ ಕೊಂಡು ಹೋದದ್ದು ನನ್ನ ಗಮನಕ್ಕೆ ಬಂದ ಕೂಡಲೇ ವಾಪಸ್ ತಂದಿಡಲು ಹೇಳಿದ್ದೆ. ಅದೇ ರೀತಿ ಅವರು ತಂದಿಟ್ಟಿದ್ದಾರೆ. ಇದರಲ್ಲಿ ಗೊಂದಲ ಇಲ್ಲ"

-ಮತಡಿ ,ಪೌರಾಯುಕ್ತ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News