ಪುತ್ತೂರು: ಕಂದಕಕ್ಕೆ ಉರುಳಿದ ಕಾರು; ಮೂವರು ಮೃತ್ಯು
Update: 2024-12-28 06:01 GMT
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಂದಕಕ್ಕೆ ಉರುಳಿ ಬಿದ್ದು ತಂದೆ ಮಗನ ಸಹಿತ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲಡ್ಕ ಬೈಪಾಸ್ ನಲ್ಲಿ ನಡೆದಿದೆ.
ಮೃತರನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ(85), ಅವರ ಪುತ್ರ ಚಿದಾನಂದ ನಾಯ್ಕ(58) ಮತ್ತು ನೆರೆಮನೆ ನಿವಾಸಿ ರಮೇಶ್ ನಾಯ್ಕ (68) ಎಂದು ಗುರುತಿಸಲಾಗಿದೆ. ಇವರು ಆಲ್ಟೋ ಕಾರಿನಲ್ಲಿ ಗೋಂದೊಳ್ ಪೂಜೆಗೆ ಪುತ್ತೂರಿನ ಪುಣಚಕ್ಕೆ ಆಗಮಿಸಿದ್ದರು. ಹಿಂತಿರುಗುವ ವೇಳೆ ಮುಂಜಾವ ಸುಮಾರು 4.15ರ ವೇಳೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದ್ದು ಬೆಳಕು ಹರಿದ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿತ್ತು.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಉದಯ ರವಿ ಹಾಗೂ ಎಫ್.ಎಸ್.ಐ. ಎಲ್ ತಂಡದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.