ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶೇ. 43ರಷ್ಟು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ : ಬಸವರಾಜ ಬೊಮ್ಮಾಯಿ

Update: 2024-04-19 11:00 GMT

ಹಾವೇರಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ 43ರಷ್ಟು ಹೆಚ್ಚಳವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರಾಜ್ಯ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೂಂಡಾ ರಾಜ್ಯ ವಾಗಿದೆ. ಪೊಲೀಸರು ಆರೋಪಿಗಳನ್ನು ಹಿಡಿದರೂ ಅವರನ್ಮು ರಾಜಕೀಯ ಪ್ರಭಾವ ಬಳಸಿ ಬಿಡುಗಡೆ ಮಾಡಿಸುತ್ತಿದ್ದಾರೆ. ಹಪ್ತಾ ವಸೂಲಿ ಹೆಚ್ಚಾಗಿದೆ. ಪೊಲಿಸ್ ಸ್ಟೇಷನ್ ಗಳು ಸೆಟ್ಲಮೆಂಟ್‌ ಕೇಂದ್ರಗಳಾಗಿವೆ ಎಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಕಾಲೇಜು ಆವರಣದಲ್ಲಿಯೇ ಒಬ್ಬ ಯುವಕ ಯುವತಿಗೆ 9 ಬಾರಿ ಇರಿದು ಓಡಿ ಹೋಗುತ್ತಾನೆ ಎಂದರೆ ಅವನ ಹಿಂದೆ ಯಾವ ಶಕ್ತಿ ಇದೆ. ಗೃಹ ಸಚಿವರು ಅದೊಂದು ಪ್ರೇಮ ಪ್ರಕರಣ ಇಷ್ಟು ಹಗುರ ಹೇಳಿಕೆ ಕೊಟ್ಟರೆ ಅಪರಾಧಿಗಳಿಗೆ ಪುಷ್ಟಿ ಬರದೇ ಇನ್ನೇನಾಗುತ್ತದೆ ಎಂದು ಪ್ರಶ್ನಿಸಿದರು.

ಹಾವೇರಿಯಲ್ಲಿ ಅತ್ಯಾಚಾರ ಪ್ರಕರಣ ನಡೆದರೆ ಅದನ್ನು ಮುಚ್ಚಿಹಾಕುವ ಯತ್ನ ಮಾಡಿದರು. ನಂತರ ಆ ಮಹಿಳೆ ಬಹಿರಂಗವಾಗಿ ಹೇಳಿಕೆ ಕೊಟ್ಟ ಮೇಲೆ ಕೇಸ್ ದಾಖಲಿಸಿಕೊಂಡರು. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತೃಗೊಳಿಸಿದರು. ಸಿಎಂ, ಡಿಜಿಪಿ ಇದ್ದಾಗಲೇ ಈ ರೀತಿ ನಡೆಯುತ್ತಿದೆ ಎಂದರೆ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದರು. ಹಾವೇರಿ ಪ್ರಕರಣದಲ್ಲಿ ಸಿಎಂ ಸ್ಥಳೀಯ ಶಾಸಕರಿಗೆ ನೋಡಿಕೊಳ್ಳುವಂತೆ ಸೂಚಿಸುತ್ತಾರೆ. ಅಂದರೆ ಅವರು ಏನೂ ಮಾತನಾಡದಂತೆ ನೋಡಿಕೊಳ್ಳಲು ಹೇಳುತ್ತಾರೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News