ಯಾವುದೇ ವಿಳಂಬವಿಲ್ಲದೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು: ಡಾ. ಶಾಲಿನಿ ರಜನೀಶ್

Update: 2024-12-14 13:58 IST
ಯಾವುದೇ ವಿಳಂಬವಿಲ್ಲದೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು: ಡಾ. ಶಾಲಿನಿ ರಜನೀಶ್
  • whatsapp icon

ಧಾರವಾಡ, ಡಿ.14: ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಅವರು ಇಂದು ಬೆಳಗ್ಗೆ, ನರೇಂದ್ರ ಕ್ರಾಸ್ ದಿಂದ ಗಬ್ಬೂರ ವರೆಗಿನ ಬೈಪಾಸ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ರಾಷ್ಷ್ರೀಯ ಹೆದ್ದಾರಿ 48 ರಲ್ಲಿ ಧಾರವಾಡದ ನರೇಂದ್ರ ಕ್ರಾಸ್ ನಿಂದ ಹುಬ್ಬಳ್ಳಿಯ ಗಬ್ಬೂರ ವರೆಗೆ ಬರುವ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ಅಗಲೀಕರಣದ ಕಾಮಗಾರಿಗೆ ಮೊದಲ ಹಂತದಲ್ಲಿ ಅಗತ್ಯವಿರುವ ಭೂಮಿ ಸ್ವಾದೀನಪಡಿಸಿಕೊಂಡು ನೀಡಿದರೂ, ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡುತ್ತಿರುವುದು ಕಂಡುಬರುತ್ತಿದೆ. ಯಾವುದೇ ವಿಳಂಬವಿಲ್ಲದೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಡಾ. ಶಾಲಿನಿ ರಜನೀಶ್ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಂದಿನ 15 ದಿನಗಳಲ್ಲಿ ಬಾಕಿ ಇರುವ ಕಾಮಗಾರಿ ಪೂರ್ತಿಗೊಳಿಸಿ, ತಮಗೆ ದಾಖಲೆ ಸಲ್ಲಿಸುವಂತೆ ಮತ್ತು ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಿ, ವರದಿ ನೀಡುವಂತೆ ಅವರು ಸೂಚಿಸಿದರು.

ಕಾಮಗಾರಿ ಗುಣಮಟ್ಟದ್ದಾಗಿರಬೇಕು. ಕಳಪೆ ಕಾಮಗಾರಿ ಆಗಲು ಅವಕಾಶವಾಗದಂತೆ ಪ್ರತಿ ಹಂತದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮೇಲುಸ್ತುವಾರಿ, ನಿಗಾ ವಹಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಗುತ್ತಿಗೆದಾರರು ಒಪ್ಪಂದದಂತೆ 2025 ರ ಡಿಸೆಂಬರ್ ಒಳಗೆ ಈ ರಸ್ತೆ ಕಾಮಗಾರಿಯನ್ನು ಪೂರ್ಣವಾಗಿಸಿ, ಸಾರ್ವಜನಿಕರ ಸಂಚಾರಕ್ಕೆ ಷಟ್ಪಥದ ರಸ್ತೆಗಳನ್ನು ಮುಕ್ತವಾಗಿಸಬೇಕು. ಈ ನಿಟ್ಟಿನಲ್ಲಿ ಗುತ್ತಿಗೆದಾರರು ಕಾಮಗಾರಿಯನ್ನು ನಿರಂತರವಾಗಿ ಕೈಗೊಂಡು ಆದಷ್ಟು ಬೇಗನೆ ಕಾಮಗಾರಿ ಮುಕ್ತಾಯಗೊಳಿಸಬೇಕು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೂಸ್ವಾದೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಕಡತಗಳನ್ನು ತಕ್ಷಣ ಕ್ಲಿಯರ್ ಮಾಡಬೇಕು. ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿ, ಅಗತ್ಯ ಹಣ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನರೇಂದ್ರ ಟೋಲ್ ಪ್ಲಾಜಾ, ಕೆಲಗೇರಿ ರೈಲ್ವೆ ಮೇಲ್ಸೇತುವೆ ಹತ್ತಿರ, ತಾರಿಹಾಳ ಸೇತುವೆ ಸೇರಿದಂತೆ ಬೈಪಾಸ್ ರಸ್ತೆಯುದ್ದಕ್ಕೂ ವಿವಿಧೆಡೆಗಳಲ್ಲಿ ಕಾಮಗಾರಿಯನ್ನು ಪರಿಶೀಲಿಸಿದ  ಡಾ.ಶಾಲಿನಿ ಅವರು, ಕೆಲಗೇರಿ ಬಳಿಯ ರೈಲ್ವೆ ಮೇಲ್ಸೇತುವೆ ಹತ್ತಿರ ಪರಿಶೀಲಿಸಿ, ಇಲ್ಲಿನ ಕಾಮಗಾರಿ ಬೇಗ ಪ್ರಾರಂಭಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಸೇತುವೆ ಅಗಲೀಕರಣ ಕಾಮಗಾರಿ ಆದಷ್ಟು ಬೇಗ ಮಾಡಬೇಕು ಎಂದು ಸೂಚಿಸಿದರು.

ಈ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ, ಭೂಸ್ವಾದೀನ ವಿಭಾಗದ ಯೋಜನಾ ನಿರ್ದೇಶಕ ಭುವನೇಶ್ ಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಧಾರವಾಡ ತಹಶಿಲ್ದಾರ ಡಿ.ಎಚ್‌.ಹೂಗಾರ, ಗುತ್ತಿಗೆದಾರರು ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News