ಹದಿನೈದು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ; ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
ಧಾರವಾಡ: ಹದಿನೈದು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈ ಕುರಿತು ಹೈ ಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಸಚಿವ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ಮತ್ತು ಸವದಿ ಹೆಸರು ಕೇಳಿ ಬರುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಬಗ್ಗೆ ಹೈ ಕಮಾಂಡರ್ ತೀರ್ಮಾನ ಮಾಡಲಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಏನು ಇಲ್ಲ ಎಂದರು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಚರ್ಚಿಸಲು ಸಭಾಪತಿಗಳ ಬಳಿ ಸಮಯ ಕೇಳಿದ್ದೇವೆ. ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗಲು ಕೂಡ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಸ್ವಾಮೀಜಿ ನ್ಯಾಯ ಸಿಗುವರೆಗೂ ಹೋರಾಟ ಮಾಡುತ್ತಾರೆ. ನಮ್ಮ ಸರ್ಕಾರ ಇದ್ದರು ನಾವು ಬೇಡ ಎಂದು ಹೇಳಲು ಆಗಲ್ಲ. ಅವರು ಇಡೀ ಪಂಚಮಸಾಲಿ ಸಮುದಾಯಕ್ಕೆ 2ಎ ಕೇಳುತ್ತಿದ್ದಾರೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಎಂಬುದು ನಮ್ಮ ಒತ್ತಾಯ ಇದೆ ಎಂದರು.
ಕೆಲ ಶಾಸಕರಿಗೆ ಮಂತ್ರಿ ಮಾಡುವ ಆಸೆ ತೋರಿಸಿ ಹೋರಾಟದಿಂದ ದೂರ ಮಾಡಿದ್ದಾರೆ ಎಂಬ ಸ್ವಾಮೀಜಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ವಿನಯ್, ನಾನು ಮಾತ್ರ ಹೋರಾಟಕ್ಕೆ ಹೋಗುವೆ. ನಾನು ಹುಟ್ಟ ಹೋರಾಟಗಾರನಿದ್ದೇನೆ. ಕೆಲವರು ಮಂತ್ರಿ ಆಸೆಯಿಂದ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ. ಹೋರಾಟಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಪಂಚಮಸಾಲಿ ಹೋರಾಟವನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದರು.
ಕೆಪಿಸಿಸಿ ಅದ್ಯಕ್ಷ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಧ್ಯಕ್ಷ ಸ್ಥಾನಕ್ಕೆ ಇಬ್ಬರು, ಮೂವರು ಆಕಾಂಕ್ಷಿಗಳು ಇದ್ದಾರೆ. ಈ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ, ಮಾಧ್ಯಮದಲ್ಲಿ ಬರುತ್ತಿದೆ. ಇದರ ಬಗ್ಗೆ ಮೀಟಿಂಗ್ ಆಗಿಲ್ಲ, ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಡಿಕೆಶಿ ಅವರು ಸಚಿವರಾಗಿರುವ ಕಾರಣ ಕೆಲಸ ಮಾಡಲು ಕಷ್ಟವಾಗುತ್ತಿದೆ. ಹಾಗಾಗಿ ಒತ್ತಡ ಜಾಸ್ತಿ ಆಗಿರೊ ಕಾರಣ ಬದಲಾವಣೆ ಮಾಡುತ್ತಿದ್ದಾರೆ. ನಾವು ಹೇಳಿದವರನ್ನು ಹೈಕಮಾಂಡ್ ಮಾಡಲ್ಲ. ಯಾರು ಒಳ್ಳೆಯವರು ಅವರನ್ನೆ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಮಾಡುತ್ತೆ ಎಂದರು.