ಅಮಿತ್ ಶಾ ಕುರುಬರನ್ನು ಕಡೆಗಣಿಸಿ ಮಾತನಾಡಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಸ್ಪಷ್ಟನೆ
ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿಲ್ಲ. ಇದು ವಿರೋಧಿಗಳು ಹೂಡಿದ ತಂತ್ರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ‘ಅಮಿತ್ ಶಾ ಅವರು ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿದ್ದಾರೆ’ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎನ್ನುತ್ತಿದ್ದಂತೆ ಸಚಿವ ಜೋಶಿ ಪ್ರತಿಕ್ರಿಯಿಸಿದರು.
ಅಮಿತ್ ಶಾ ಅವರು ಯಾವ ಸಭೆಯಲ್ಲೂ ಹಾಗೆ ಹೇಳಿಲ್ಲ. ಅದೆಲ್ಲ ಸುಳ್ಳು. ನಾನೂ ಆ ಸಭೆಯಲ್ಲಿ ಇದ್ದೆ. ಕುರುಬ ಸಮುದಾಯದವರು ಸದಾ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಈಗ ಆ ಸಮುದಾಯದವರೇ ಮುಖ್ಯಮಂತ್ರಿ ಇದ್ದಾರೆ. ಸಹಜವಾಗಿ ತಮ್ಮ ಸಮಾಜದವರನ್ನು ಸೆಳೆಯಲು ಯತ್ನಿಸಬಹುದು. ಬಿಜೆಪಿ ಬೆಂಬಲಿತ ಆ ಸಮುದಾಯವನ್ನು ಬಿಟ್ಟುಕೊಡಬೇಡಿ ಎಂದು ಅಮಿತ್ ಶಾನಮಗೆ ಸಲಹೆ ಮಾಡಿದರು. ಇದು ಸತ್ಯ ಸಂಗತಿ ಎಂದರು.
ಇನ್ನೂ, ದೇಶದಲ್ಲಿ ಹತ್ತು ವರ್ಷ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ನಯಾ ಪೈಸೆ ಭ್ರಷ್ಟಾಚಾರ ಮಾಡಿಲ್ಲ. ಪ್ರಧಾನಿ ಮೋದಿ ಅವರು, ತಮ್ಮ ಸಂಪುಟದ ಯಾರೊಬ್ಬ ಮಂತ್ರಿಯೂ ಭ್ರಷ್ಟಾಚಾರ ಮಾಡಿದರೆ ಅವತ್ತೇ ಸಂಜೆ ಮನೆಗೆ ಕಳುಹಿಸುತ್ತಾರೆ. ಅಷ್ಟರ ಮಟ್ಟಿಗೆ ಸ್ವಚ್ಛ ಆಡಳಿತ ನೀಡಿದ್ದೇವೆ ಎಂದು ತಿಳಿಸಿದರು.