ಹುಬ್ಬಳ್ಳಿ ಪ್ರಕರಣ ವಾಪಸ್, ರಾಜ್ಯ ಸರಕಾರದಿಂದ ತುಷ್ಟೀಕರಣದ ರಾಜಕಾರಣ : ಬೊಮ್ಮಾಯಿ

Update: 2024-10-13 07:24 GMT

ಹುಬ್ಬಳ್ಳಿ : ಹುಬ್ಬಳ್ಳಿಯ ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದ್ದು, ರಾಜ್ಯ ಸರಕಾರ ಪ್ರಕರಣವನ್ನು ವಾಪಸ್‌ ಪಡೆಯುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದ್ದು, ರಾಜ್ಯದ ಮೇಲಿನ ದಾಳಿಯಾಗಿದೆ. ಇದು ಗಂಭೀರವಾದ ಪ್ರಕರಣ, ಇದನ್ನು ಎನ್‌ಐಎಗೆ ನೀಡಲಾಗಿದ್ದು, ಚಾರ್ಜ್‌ ಶೀಟ್ ಆಗಿದೆ. ಯುಎಪಿಐ ಅಡಿ ಎನ್‌ಐಎಗೆ ತನಿಖೆಗೆ ನೀಡುವಂತಹ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರಕಾರಕ್ಕೆ ಅಧಿಕಾರ ಇಲ್ಲ. ಎನ್‌ಐಎಗೆ ನೀಡಿರುವ ಪ್ರಕರಣವನ್ನು ವಾಪಸ್ ಪಡೆಯಲು ಬರುವುದಿಲ್ಲ ಎಂದು ರಾಜ್ಯ ಸರಕಾರಕ್ಕೂ ಗೊತ್ತಿದೆ. ಆದರೂ, ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ" ಎಂದು ಹೇಳಿದರು.

ರಾಜ್ಯ ಸರಕಾರ ದೊಡ್ಡ ತಪ್ಪು ಸಂದೇಶ ರವಾನೆ ಮಾಡುತ್ತಿದೆ. ರಾಜ್ಯದಲ್ಲಿ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣ, ಮಂಗಳೂರಿನಲ್ಲಿ ಗಲಭೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಲಾಗಿದೆ. ಹಾಗಿದ್ದರೆ ಇನ್ನು ಮುಂದೆ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದರೆ, ಪೊಲೀಸರು ಏನೂ ಮಾಡುವಂತಿಲ್ಲವೇ ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News