ಬಿಜೆಪಿ ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ : ರಣದೀಪ್ ಸಿಂಗ್ ಸುರ್ಜೆವಾಲ
ಹುಬ್ಬಳ್ಳಿ : ಮೋದಿಯವರು ಪ್ರಧಾನ ಮಂತ್ರಿ ಅಲ್ಲ, ಪರಿಧಾನ್ ಮಂತ್ರಿ. ಬಿಜೆಪಿ ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾದ ರಣದೀಪ್ ಸಿಂಗ್ ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಖಾಸಗಿ ಹೊಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಗ್ಯಾರಂಟಿ ವಿಚಾರದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದೆವು, ತಂದಿದ್ದೇವೆ . ಆದರೆ ನಮ್ಮ ಗ್ಯಾರಂಟಿಗಳನ್ನು ಈಗ ತಮಾಷೆ ಮಾಡುತ್ತಿದ್ದಾರೆ. ಖುದ್ದು ಮೋದಿ ಅವರೇ ಗ್ಯಾರಂಟಿ ಜಾರಿಯಾಗಲ್ಲ ಎಂದಿದ್ದರು. ಆದರೆ ಕರ್ನಾಟಕದ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿಯಾಗಿದೆ" ಎಂದು ಹೇಳಿದರು.
ಕಾನೂನು ವಿದ್ಯಾರ್ಥಿನಿಯೊಬ್ಬರು ಉಚಿತ ಬಸ್ ಟಿಕೆಟ್ ನ ಹಾರವನ್ನೇ ಸಿಎಂಗೆ ಹಾಕಿದ್ದಾರೆ. ಇದು ಕಾಂಗ್ರೆಸ್ ಗ್ಯಾರಂಟಿಗೆ ಮಾದರಿಯಾಗಿದೆ. ಈಗ ಕನ್ನಡಿಗರು ಮೋದಿಯವರಿಗೆ ಖಾಲಿ ಚೊಂಬು ಉಡುಗೊರೆಯಾಗಿ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕ ಜೂನ್ ನಲ್ಲಿ ಬರ ಪರಿಹಾರ ಕೇಳಿತ್ತು. ಆದರೆ ಬರ ಪರಿಹಾರ ಕೊಡದೆ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರಿತು. ಕೇಂದ್ರದ ಮುಂದೆ ನಾವು ಭಿಕ್ಷೆ ಬೇಡುತ್ತಿಲ್ಲ. ಕನ್ನಡಿಗರು ತೆರಿಗೆ ಕಟ್ಟಿದ್ದಾರೆ. ಕನ್ನಡಿಗರು ಕೊಟ್ಟ ತೆರೆಗೆ ಪೈಕಿ ಕೆಲ ಹಣ ವಾಪಸ್ ಕೇಳುತ್ತಿದ್ದೇವೆ. ಆದರೆ ಮೋದಿಯವರು ಚೊಂಬು ತೋರಿಸಿದ್ದಾರೆ. ಖಾಲಿ ಚೊಂಬು ತಗೆದುಕೊಳ್ಳಿ ಎಂದು ಮೋದಿ ಹೇಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೇಕೆ ದಾಟು, ಮಹದಾಯಿ ವಿಚಾರದಲ್ಲಿಯೂ ಚೊಂಬು ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರೀ ಮೋದಿ ಅವರಿಗೆ ಕನ್ನಡಿಗರು ಖಾಲಿ ಚೊಂಬು ಉಡುಗೊರಿಯಾಗಿ ಕೊಡುತ್ತಾರೆ. ಮೋದಿ ಅವರೇ ನಮ್ಮ ಗ್ಯಾರಂಟಿಯನ್ನು ಕಾಪಿ ಮಾಡಿದ್ದಾರೆ. ದ್ವಂದ್ವ ನೀತಿ ಬಿಜೆಪಿ ಡಿ.ಎನ್.ಎ ಯಲ್ಲಿದೆ. ಹೇಳುವುದು ಒಂದು, ಮಾಡುವುದು ಮತ್ತೊಂದು ಲೇವಡಿ ಮಾಡಿದರು.
ಸಂವಿಧಾನ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ನಾವು ಬದಲಾವಣೆ ವಿಚಾರ ಮಾತನಾಡಿಲ್ಲ. ಸಂವಿಧಾನ ಬದಲಾವಣೆ ಮಾತನಾಡಿದವರು ಬಿಜೆಪಿಯವರು. ಅನಂತಕುಮಾರ್ ಹೆಗಡೆ ಯಾರು..? ಸಂವಿಧಾನ ಬದಲಾವಣೆ ಮಾತುಗಳು ಬರುತ್ತಿರೋದೇ ಬಿಜೆಪಿ ನಾಯಕರ ಬಾಯಲ್ಲಿ, ಖುದ್ದು ಮೋದಿಯವರೇ ಸಂವಿಧಾನ ಬದಲಾವಣೆಗೆ ಪಿತೂರಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.