ಕೇಜ್ರಿವಾಲ್ ಬಂಧನದಲ್ಲಿ ಕೇಂದ್ರ ಸರಕಾರದ ಪಾತ್ರವಿಲ್ಲ: ಪ್ರಹ್ಲಾದ್ ಜೋಶಿ

Update: 2024-03-22 12:24 GMT

ಹುಬ್ಬಳ್ಳಿ: ‘ಅಬಕಾರಿ ನೀತಿ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಸಂಬಂಧ ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಪ್ರಕರಣದಲ್ಲಿ ಕೇಂದ್ರ ಸರಕಾರದ ಪಾತ್ರವಿಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೇಜ್ರಿವಾಲ್‍ ಅವರಿಗೆ ಜಾರಿ ನಿರ್ದೇಶನಾಲಯ ಅತಿಹೆಚ್ಚು ಅಂದರೆ 9 ಬಾರಿ ಸಮನ್ಸ್ ಕೊಟ್ಟಿದೆ. ಸ್ಪಂದಿಸದಿದ್ದಾಗ ಕಾನೂನು ರೀತಿಯ ಕ್ರಮವಾಗಿದೆ ಎಂದು ಪ್ರತಿಕ್ರಿಯಿಸಿದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಕೇಜ್ರಿವಾಲ್ ಸರಿಯಾದ ಮಾಹಿತಿಯನ್ನು ಕೊಡಲಿಲ್ಲ. ಹೈಕೋಟ್‍ಗೆ ಹೋದರು. ನಿಮ್ಮ ರಕ್ಷಣೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು. ನಿನ್ನೆಯೂ ವಿಚಾರಣೆಗೆ ಸಹಕರಿಸಿಲ್ಲ. ಹಾಗಾಗಿ ಬಂಧನವಾಗಿದೆ ಎಂದು ಜೋಶಿ ಸ್ಪಷ್ಟಪಡಿಸಿದರು.

ಇಡೀ ದೇಶದಲ್ಲೇ ಈಗ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗ ಇದರಲ್ಲಿ ಕೇಂದ್ರದ ಪಾತ್ರ ಇರುವುದಿಲ್ಲ. ಈಡಿ ಅಧಿಕಾರಿಗಳು, ಕಾನೂನು ತನ್ನ ಕೆಲಸ ತಾನು ಮಾಡುತ್ತದೆ ಅಷ್ಟೇ. ಅಣ್ಣಾ ಹಝಾರೆ ಭ್ರಷ್ಟಾಚಾರ ನಿರ್ಮೂಲನ ಆಂದೋಲನದ ಮೂಲಕ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಅವರಿಂದ ಇಂತಹ ಭ್ರಷ್ಟಾಚಾರವನ್ನು ನಿರೀಕ್ಷಿಸಿರಲಿಲ್ಲ ಎಂದು ಜೋಶಿ ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News