ಧಾರವಾಡ : ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ
ಧಾರವಾಡ : ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಾಪಮಪತ್ರವನ್ನು ಹಿಂಪಡೆದಿದ್ದಾರೆ.
ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಇದು ಧರ್ಮ ಯುದ್ಧ ಎಂದು ಹೇಳಿದ್ದ ಸ್ವಾಮೀಜಿ, ಸೋಮವಾರ ತಮ್ಮ ಸೂಚಕರಾಗಿದ್ದ ಸಚಿನ್ ಪಾಟೀಲ ಹಾಗೂ ಅಮೃತ ಬಳ್ಳೋಳ್ಳಿ ಅವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಅವರ ಮೂಲಕ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮತ್ತೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ ಬೆನ್ನಲ್ಲೇ ದಿಂಗಾಲೇಶ್ವರ ಸ್ವಾಮೀಜಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿವುದಾಗಿ ಘೋಷಿಸಿದ್ದರು. ಅಲ್ಲದೇ, ಜೋಶಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದ ಸ್ವಮೀಜಿಗಳು, ತಮ್ಮ ಸಾವಿರಾರು ಬೆಂಬಲಿಗರ ನೇತೃತ್ವದಲ್ಲಿ ನಾಮಪತ್ರವನ್ನು ಸಹ ಸಲ್ಲಿಸಿದ್ದರು.
"ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು. ನಾನು ಪ್ರಹ್ಲಾದ್ ಜೋಶಿಯವರ ಕೈಯಲ್ಲಿ ನೋವು ಅನುಭವಿಸಿದ ಜನರ ಧ್ವನಿಗಾಗಿ ನಾನು ಹೋರಾಟ ನಡೆಸುತ್ತಿದ್ದೆನೆ" ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು.