ಧಾರವಾಡ | ಮಗು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತಾಯಿ ದೂರು: ಸಂಸ್ಕಾರ ಮಾಡಿದ್ದ ಮೃತದೇಹ ಹೊರ ತೆಗೆದು ಪರೀಕ್ಷೆಗೆ ರವಾನೆ
ಧಾರವಾಡ: ಮೂರು ವರ್ಷದ ಪುತ್ರನ ಸಾವಿನ ಬಗ್ಗೆ ಸಂಶಯ ಇರುವುದಾಗಿ ತಾಯಿ ಪೊಲೀಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ವಾರದ ಹಿಂದೆ ಸಂಸ್ಕಾರ ಮಾಡಿದ್ದ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಹೊರತೆಗೆದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರಿನ ಸ್ಮಶಾನಗಟ್ಟಿ ಎಂಬಲ್ಲಿ ನಡೆದಿದೆ.
ಯಮನೂರಿನ ವೆಂಕಪ್ಪ ಮತ್ತು ಶಾಂತಾ ದಂಪತಿ ಪುತ್ರ 3 ವರ್ಷದ ಮಗು ಯಲ್ಲಪ್ಪ ನ.8ರಂದು ಮೃತಪಟ್ಟಿತ್ತು. ಪಕ್ಕದ ಮನೆಯವರ ಹಿತ್ತಲಲ್ಲಿ ಆಟವಾಡುತ್ತಿದ್ದ ವೇಳೆ ಮೈಮೇಲೆ ಕಬ್ಬಿಣದ ಬಂಡ್ಫರ್ಮ್ ಬಿದ್ದು ಮಗು ಮೃತಪಟ್ಟಿದ್ದಾಗಿ ಹೇಳಲಾಗಿತ್ತು. ಬಳಿಕ ಮಗುವಿನ ಅಂತ್ಯ ಸಂಸ್ಕಾರ ಮಾಡಲಾಗಿತ್ತು.
ಈ ನಡುವೆ ಮಗುವಿನ ಸಾವಿನ ಬಗ್ಗೆ ಸಂಶಯ ಇರುವುದಾಗಿ ತಾಯಿ ಶಾಂತಾ ಅವರು ನ.12ರಂದು ನಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
" ನಮ್ಮ ಮನೆ ಮುಂದಿನ ದಾರಿ ವಿಚಾರವಾಗಿ ನೆರೆಮನೆಯ ನಾಗಲಿಂಗ ಜೋಗಿ ಮನೆಯವರ ಜೊತೆಗೆ ನಮಗೆ ಮೊದಲಿನಿಂದಲೂ ತಕರಾರಿದೆ. ಇದೇ ವಿಚಾರವಾಗಿ ಸುಮಾರು ಆರು ತಿಂಗಳ ಹಿಂದೆ ನನ್ನ ಪತಿಯ ಕಾಲಿನ ಮೇಲೆ ನಾಗಲಿಂಗನ ತಮ್ಮ ಸಿದ್ದಪ್ಪ ಟ್ರ್ಯಾಕ್ಟರ್ ಹರಿಸಿದ್ದ. ಈ ಮಧ್ಯೆ ನ.8ರಂದು ನನ್ನ ಮಗು ಯಲ್ಲಪ್ಪ ನೆರೆಮನೆಯವರ ಹಿತ್ತಲಲ್ಲಿ ಆಟವಾಡುತ್ತಿದ್ದ ವೇಳೆ ಕಬ್ಬಿಣದ ಬಂಡ್ಫರ್ಮ್ ಮೈಮೇಲೆ ಬಿದ್ದು ಮೃತಪಟ್ಟಿದ್ದಾಗಿ ಮಗುವನ್ನು ಎತ್ತಿಕೊಂಡಿದ್ದ ಬಂದಿದ್ದ ನಾಗಲಿಂಗ ಜೋಗಿ ನಮಗೆ ಹೇಳಿದ್ದ. ಆದರೆ ಮಗುವಿನ ಅಂತ್ಯ ಸಂಸ್ಕಾರ ನೆರವೇರಿಸಿದ ಬಳಿಕ ನಾಗಲಿಂಗ ಜೋಗಿ ನಾಪತ್ತೆಯಾಗಿದ್ದಾನೆ. ಇದು ನನ್ನ ಮಗನ ಸಾವಿನ ಬಗ್ಗೆ ಸಂಶಯ ಮೂಡಲು ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ಮಾಡಬೇಕು'' ಎಂದು ಶಾಂತಾ ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಯಮನೂರಿನ ಸ್ಮಶಾನಗಟ್ಟಿಯಲ್ಲಿ ಹೂತಿದ್ದ ಮಗು ಯಲ್ಲಪ್ಪನ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಗುರುವಾರ ಬೆಳಗ್ಗೆ ಹೊರತೆಗೆಯಲಾಗಿದೆ.
ಈ ಸಂದರ್ಭ ತಹಶೀಲ್ದಾರ್ ಸುಧೀರ್ ಸಾಹುಕಾರ್, ಪಿಎಸ್ಸೈ ಜನಾರ್ದನ ಭಟ್ರಳ್ಳಿ ಸ್ಥಳದಲ್ಲಿ ಉಪಸ್ಥಿತರಿದ್ದರು.