ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆಗೈದ ಕಳವು ಪ್ರಕರಣದ ಆರೋಪಿ ಕಾಲಿಗೆ ಗುಂಡೇಟು
ಹುಬ್ಬಳ್ಳಿ, ಜು.26: ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಯೋರ್ವನನ್ನು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ಗಾಮನಗಟ್ಟಿ ರಸ್ತೆ ತಾರಿಹಾಳ ಕ್ರಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ.
ಮುಂಬೈ ಮೂಲದ ಫರ್ಹಾನ್ ಶೇಖ್ ಬಂಧಿತ ಆರೋಪಿ. ಕೇಶ್ವಾಪುರದ ರಮೇಶ ಭವನದ ಬಳಿಯಿರುವ ಭುವನೇಶ್ವರಿ ಜ್ಯುವೆಲ್ಲರಿ ಶಾಪ್ ನಲ್ಲಿ ಇತ್ತೀಚೆಗೆ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಕೇಶ್ವಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನುಳಿದ ಆರೋಪಿಗಳನ್ನು ವಶಕ್ಕೆ ಪಡೆಯುವ ಸಲುವಾಗಿ ಆರೋಪಿ ಜೊತೆಗೆ ಪೊಲೀಸರು ಇಂದು ಬೆಳಗ್ಗೆ ಗಾಮನಗಟ್ಟಿ ರಸ್ತೆ ತಾರಿಹಾಳ ಕ್ರಾಸ್ ಬಳಿ ತಂದು ಕಾರ್ಯಾಚರಣೆ ನಡೆಸಲು ಮುಂದಾಗಿದ್ದರು. ಈ ವೇಳೆ ಫರ್ಹಾನ್ ಶೇಖ್ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆಗ ಗೋಕುಲ ಠಾಣೆಯ ಪಿಎಸ್ಸೈ ಕವಿತಾ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ, ನಂತರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಫರ್ಹಾನ್ ನನ್ನು ಬಂಧಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ವಿರುದ್ಧ ಹೈದರಾಬಾದ್, ಕಲಬುರಗಿ, ಅಹ್ಮದನಗರ, ಸೂರತ್ ಮತ್ತು ಮುಂಬೈನಲ್ಲಿ ಕೊಲೆ, ಡಕಾಯಿತಿ, ದರೋಡೆ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಕೆಲವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೂಟೌಟ್ ಸಂದರ್ಭ ಪಿಎಸ್ಸೈ ಕವಿತಾ ಮಾಡಗ್ಯಾಳ, ಮಹಿಳಾ ಪೊಲೀಸ್ ಕಾನಸ್ಟೇಬಲ್ ಸುಜಾತಾ ಮತ್ತು ಕಾನಸ್ಟೇಬಲ್ ಮಹೇಶ ಎಂಬವರು ಗಾಯಗೊಂಡಿದ್ದು, ಅವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.