ಪ್ರಹ್ಲಾದ್ ಜೋಶಿ ವಿರುದ್ಧ ಈಗ ಹೋರಾಟ ಆರಂಭ ಮಾಡಿದ್ದೇನೆ , ನ್ಯಾಯ ಸಿಗುವವರೆಗೂ ಮಾಲೆ ಹಾಕುವುದಿಲ್ಲ : ದಿಂಗಾಲೇಶ್ವರ ಸ್ವಾಮೀಜಿ
ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ವಿರುದ್ಧ ಹೋರಾಟವನ್ನು ಈಗ ಆರಂಭ ಮಾಡಿದ್ದೇನೆ. ನ್ಯಾಯ ಸಿಗುವವರೆಗೂ ನಾನು ಕೊರಳಲ್ಲಿ ಮಾಲೆ ಹಾಕುವುದಿಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಇಂದು ಧಾರವಾಡದಲ್ಲಿ ನಡೆದ ಭಕ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಕೇವಲ ವ್ಯಕ್ತಿಯ ಹಿತಕ್ಕಾಗಿ ಹೋರಾಟ ಮಾಡಿದವನು ನಾನು ಅಲ್ಲ. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೋರಾಟ ಮಾಡುತ್ತಿದ್ದಾಗ, ಅದೆಲ್ಲಾ ಒಂದೇ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ನಾನೇ ಹೋರಾಟ ಮಾಡಿದ್ದೇನೆ. ಅಲ್ಲದೆ, ಬಿ.ಎಸ್.ಯಡಿಯೂರಪ್ಪನ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಾಗ ಬಿಜೆಪಿ ಹೈಕಮಾಂಡ್ ವಿರುದ್ಧವು ನಾನು ಹೋರಾಟ ಮಾಡಿದ್ದೇನೆ ಎಂದು ತಿಳಿಸಿದರು.
ನನ್ನ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾನು ಇರುವ ವೇದಿಕೆಯಲ್ಲಿ ಮಾಲೆ ಹಾಕಲು ಬೀಡುವುದಿಲ್ಲ. ಗುರಿ ಮುಟ್ಟೋವರೆಗೂ ರಾಜ್ಯದ ಜನತೆ ನನಗೆ ಮಾಲೆ ಹಾಕಬೇಡಿ. ಹೋರಾಟಕ್ಕೆ ಜಯ ಸಿಕ್ಕ ಮೇಲೆ ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಮಾಲೆ ಹಾಕಬೇಕು ಎಂದು ತಿಳಿಸಿದರು.
ಜಾತಿ ಮತ್ತು ಪಕ್ಷದ ಪರವಾದ ಹೋರಾಟ ನನ್ನದ್ದಲ್ಲ. ಪ್ರಹ್ಲಾದ್ ಜೋಶಿಯನ್ನು ನಮ್ಮ ಸಮಾಜದವರು ಗೆಲ್ಲಿಸಿದರು. ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗೆಲ್ಲಿಸಿದವರನ್ನೇ ಮರೆತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರಹ್ಲಾದ್ ಜೋಶಿಯವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಜನರಿಗೆ ಟಿಕೆಟ್ ಆಮಿಷ ತೋರಿಸಿದರು. ಮಹೇಶ ನಾಲವಾಡ ಅವರನ್ನು ಬಳಕೆ ಮಾಡಿಕೊಂಡು ಬಿಸಾಕಿದ್ದಾರೆ. ಈಶ್ವರಪ್ಪನವರಿಗೂ ಮೋಸ ಮಾಡಿದವರು. ಜೋಶಿ ನಿಮಗೆ ಮೋಸ ಮಾಡ್ತಾರೆ ನಾನು ಲಿಖಿತ ರೂಪದಲ್ಲಿ ಬರೆದು ಕೊಡುತ್ತೆನೆಂದು ಈಶ್ವರಪ್ಪನವರಿಗೆ ನಾ ಹೇಳಿದ್ಧೆ ಈಗ ಅವರ ಮಗನಿಗೆ ಟಿಕೆಟ್ ಕೊಡದೆ ಜೋಶಿ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸ್ವಾಮೀಜಿಗಳಿಗೆ ರಾಜಕಾರಣ ಏಕೆ ಬೇಕು ಎಂದು ಪ್ರಹ್ಲಾದ್ ಜೋಶಿ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಮಾಡುತ್ತಾರೆ. ನಿಮ್ಮ ಕಾರ್ಯಕ್ರಮ ವೇದಿಕೆಯನ್ನು ಹಂಚಿಕೆಕೊಂಡು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಸ್ವಾಮೀಜಿಗಳು ನಿಮಗೆ ಬೇಕಾಗಿತೇ?. ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕಬಾರದು. ನೊಂದವರ ಬೆನ್ನಿಗೆ ಸ್ವಾಮೀಜಿಗಳು ನಿಲ್ಲಬೇಕು ಎಂದು ಹೇಳಿದರು.