ಎಸ್ಪಿ ಮೇಲೆ ಪ್ರಭಾವ ಬೀರಿದ್ದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ : ಬೊಮ್ಮಾಯಿಗೆ ಸಚಿವ ಶಿವಾನಂದ ಪಾಟೀಲ್ ಸವಾಲು
ಹುಬ್ಬಳ್ಳಿ : ‘ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮ ಪುತ್ರನನ್ನು ಗೆಲ್ಲಿಸಲು ಸಂಸದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ರೌಡಿ ಶೀಟರ್ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಸಚಿವ ಶಿವಾನಂದ ಪಾಟೀಲ್ ಇಂದಿಲ್ಲಿ ದೂರಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯಾಸಿರ್ ಪಠಾಣ್ ರೌಡಿ ಶೀಟರ್ ಅಲ್ಲ’ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಎಸ್ಪಿ ಮೇಲೆ ಸರಕಾರ ಒತ್ತಡ ಹೇರಿ, ಸರಕಾವೇ ಈ ಹೇಳಿಕೆ ಕೊಡಿಸಿದೆ ಎಂದು ಬಸವರಾಜ ಬೊಮ್ಮಾಯಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಹೇಳಿದರು.
ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳಲು, ಸ್ವಾರ್ಥ ಸಾಧನೆಗಾಗಿ ಬೊಮ್ಮಾಯಿ ಇಂತಹ ಆರೋಪ ಮಾಡುತ್ತಿರುವುದು ದುರಾದೃಷ್ಟಕರ. ಎಸ್ಪಿಯವರ ಮೇಲೆ ನಾನಾಗಲೀ, ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲೀ ಯಾವುದೇ ರೀತಿಯ ಪ್ರಭಾವ ಬೀರಿಲ್ಲ. ನಾನು ಪ್ರಭಾವ ಬೀರಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಪಾಟೀಲ್ ಸವಾಲು ಹಾಕಿದರು.
ಶಿಗ್ಗಾಂವಿ ಕ್ಷೇತ್ರದ ಪ್ರತಿ ಚುನಾವಣೆಯಲ್ಲೂ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಇಂತಹ ಆರೋಪ ಮಾಡುತ್ತಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಖಾದ್ರಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದಾರೆಂದು ಆರೋಪಿಸಿದ್ದರು. ಕೊನೆಕ್ಷಣದಲ್ಲಿ ಇಂತಹ ಆಪಾದನೆ ಮಾಡಿದರೆ ಮತದಾರರು ವಿಚಲಿತರಾಗಬಹುದು ಎನ್ನುವ ಆತಂಕ ಅವರನ್ನು ಕಾಡುತ್ತಿದೆ' ಎಂದು ಪಾಟೀಲ್ ಟೀಕಿಸಿದರು.