ನೇಹಾ ಕೊಲೆ ಪ್ರಕರಣ | ಎನ್‌ಕೌಂಟರ್ ಕಾನೂನು ಜಾರಿಯಾಗಬೇಕು ಎಂದ ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ : ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಅತ್ಯಂತ ಖಂಡನೀಯವಾಗಿದ್ದು, ಇಂತಹ ಪ್ರಕರಣದಲ್ಲಿ ಆರೋಪಿಗೆ ಎನ್ ಕೌಂಟರ್ ಕಾನೂನು ಬರಲೇಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ನೇಹಾ ಕುಟುಂಬದವರಿಗೆ ಸಾಂತ್ವನ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, "ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮುಖಂಡರು ಈಗಾಗಲೇ ಮಾತನಾಡಿದ್ದು, ಈ ಕುರಿತು ನಾನು ಹೆಚ್ವಿಗೆ ಹೇಳುವುದಿಲ್ಲ. ಆದರೆ, ಇಂತಹ ಪ್ರಕರಣಗಳಿಗೆ ಮುಂದೊಂದು ದಿನ ಎನ್ ಕೌಂಟರ್ ಕಾನೂನು ಬರಲೇಬೇಕು. ಇದು ಜಾರಿಯಾದರೆ, ಇಂತಹ ಪ್ರಕರಣದ ಆರೋಪಿಗಳನ್ನು ಹೊಡೆದುರುಳಿಸಬಹುದು" ಎಂದು ನುಡಿದರು.
"ಎಲ್ಲ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಸರ್ಕಾರಗಳ ಅವಧಿಯಲ್ಲಿ ಘಟನೆಗಳ ಸಂಖ್ಯೆಗಳನ್ನು ಕೊಡಬಲ್ಲೆ, ಆದರೆ ಅದಕ್ಕೆ ಉತ್ತರಿಸುವ ಪರಿಸ್ಥಿತಿ ಇದಲ್ಲ. ಕೆಲವರು ಇದನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ಅವರಿಗೆ ಏನು ಅಂತಾ ಹೇಳಲಿ, ಇಂತಹ ಸೂಕ್ಷ್ಮ ವಿಷಯಗಳಲ್ಲಿ ರಾಜಕೀಯಗೊಳಿಸದೇ ಸೂಕ್ಷ್ಮತೆ ಕಾಯ್ದುಕೊಳ್ಳಬೇಕು" ಎಂದು ವಿಪಕ್ಷಗಳಿಗೆ ಕಿವಿ ಮಾತು ಹೇಳಿದರು.
ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 13 ಲಕ್ಷ ಯುವತಿಯರು, ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಚಿವ ಪ್ರಹ್ಲಾದ್ ಜೋಶಿ ಉತ್ತರಿಸಬೇಕು. ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ರಾಜಕರಣ ಮಾಡುತ್ತಿದ್ದು, ಘಟನೆಯನ್ನು ಬೇರೆ ಆಯಾಮದಲ್ಲಿ ನೋಡಬಾರದು. ತನಿಖೆ ಮುಗಿಯುವ ಮೊದಲು ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಪ್ರಕರಣ ನಡೆದೇ ಇಲ್ಲವೇ? ಅಂಕಿಸಂಖ್ಯೆ ಕೊಡಲೇ ಎಂದು ತಿರುಗೇಟು ನೀಡಿದರು.