ಕೋವಿಶೀಲ್ಡ್ ಲಸಿಕೆ ಬಗ್ಗೆ ಭಯ ಪಡುವ ಅಗತ್ಯವಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Update: 2024-05-04 10:12 GMT

Photo: X/Dineshgundurao

ಧಾರವಾಡ: ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬುದರ ಕುರಿತು ಜನರು ಭಯ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.‌

ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕೆಲವರಿಗೆ ಅಡ್ಡ ಪರಿಣಾಮಗಳು ಆಗಿರುವ ಬಗ್ಗೆ ಮಾಹಿತಿ ಇದೆ.‌ ಲಸಿಕೆ ಎಂದ ಮೇಲೆ ಸಣ್ಣ ಪ್ರಮಾಣದ ಸೈಡ್ ಎಫೆಕ್ಟ್ ಇರುತ್ತೆ. ಆದರೆ ಜನರು ಏನೋ ಆಗಿಬಿಡುತ್ತೆ ಎಂದು ಭಯಪಡಬಾರದು ಎಂದು ಹೇಳಿದರು.

ಕರ್ನಾಟಕದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಬರಳಣಿಕೆಯಷ್ಟು ಜನರಿಗೆ ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ. ನಾಲ್ಕು ಐದು ಜನರಿಗೆ ವ್ಯಾಕ್ಸಿನ್ ಪಡೆದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿರುವ ಬಗ್ಗೆ ಮಾಹಿತಿ ಇದೆ. ಆದರೆ ಇದು ಲಸಿಕೆಯಿಂದಲೇ ಆಗಿದೆಯಾ ಅಥವಾ ಬೇರೆ ಅರೋಗ್ಯದ ಸಮಸ್ಯೆಗಳು ಕೂಡ ಕಾರಣವಾ ಎಂಬುದನ್ನು ನೋಡಬೇಕು ಎಂದರು.‌

ಕೋವಿಶೀಲ್ಡ್ ವಾಕ್ಸಿನ್ ಪಡೆದವರೆಲ್ಲರಿಗೂ ಆರೋಗ್ಯ ತೊಂದರೆಗಳಾಗುತ್ತವೆ ಎಂದು ಭಯ ಪಡುವ ಅಗತ್ಯವಿಲ್ಲ. ಏನೋ‌ ಆಗಿಬಿಡಿತ್ತೆ ಎಂದು ಸಾರ್ವತ್ರಿಕವಾಗಿ ಭಯದ ವಾತವಾರಣ ಸೃಷ್ಟಿಯಾಗುತ್ತಿರುವುದನ್ನ ಗಮನಿಸಿದ್ದೇನೆ. ಆದರೆ ಈಗಾಗಲೇ ವ್ಯಾಕ್ಸಿನ್ ಪಡೆದು ಎರಡು ವರ್ಷಗಳು ಕಳೆದು ಹೋಗಿವೆ. ಹೀಗಿರುವಾಗ ಈಗ ಅಷ್ಟೊಂದು ಅಡ್ಡಪರಿಣಾಮ ಆಗಲ್ಲ ಎಂಬ ಅಭಿಪ್ರಾಯಗಳು ಕೂಡ ಇದೆ.

ವದಂತಿಗಳಿಗೆ ಜನರು ಕಿವಿಗೊಡಬಾರದು. ಯಾರಿಗೆ ದೇಹದಲ್ಲಿ ಸಮಸ್ಯೆಗಳು ಕಂಡುಬಂದು, ಅನುಮಾನಗಳಿದ್ದರೆ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ನಿರ್ದೇಶನ ನೀಡಲಿದೆ ನೋಡೊಣ. ವ್ಯಾಕ್ಸಿನೇಷನ್ ಮಾಡುವುದನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ‌. ಕೇಂದ್ರ ಸರ್ಕಾರದ ಬಳಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಹೀಗಾಗಿ ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುತ್ತವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕೋವಿಡ್ ಲಸಿಕೆ ಪಡೆದವರಲ್ಲಿ ಬೆರಳೆಣಿಯಷ್ಟು ಜನರಿಗೆ ಮಾತ್ರ ಆರೋಗ್ಯದಲ್ಲಿ ಸಮಸ್ಯೆಗಳಾಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News