ಮುಡಾ ಅಕ್ರಮ | ಬಿಜೆಪಿಯವರು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಿ : ಪ್ರಹ್ಲಾದ್ ಜೋಶಿ

Update: 2024-07-13 12:53 GMT

ಹುಬ್ಬಳ್ಳಿ : ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಬಿಜೆಪಿ ಅವಧಿಯಲ್ಲಿ ತಪ್ಪು ನಡೆದಿದ್ದರೆ ಅವರ ಮೇಲೆಯೂ ಕ್ರಮ ಜರುಗಿಸಲಿ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "2013ರ ಚುನಾವಣೆ ಅಫಿಡವಿಟ್‍ನಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಸ್ತಿ ವಿವರವನ್ನು ನೀಡಿಲ್ಲ. ಮುಡಾ ಹಗರಣದಲ್ಲಿ ಇದು ಶೇ.200 ಪರ್ಸೆಂಟ್ ಭ್ರಷ್ಟ ಸರಕಾರ. ತಮ್ಮ ಪ್ರಭಾವ ಬಳಸಿಯೇ ಸಿದ್ದರಾಮಯ್ಯ 14 ನಿವೇಶನಗಳನ್ನು ಪಡೆದಿದ್ದಾರೆ" ಎಂದು ಟೀಕಿಸಿದರು.

ಬಿಜೆಪಿ ಅವಧಿಯಲ್ಲಿ ನೀಡಿದ್ದರೆ ಅವರು ಬೇಡ ಎನ್ನಬಹುದಿತ್ತು. ಒಂದು ವೇಳೆ ಬಿಜೆಪಿಯವರು ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಿ. ಸಿದ್ದರಾಮಯ್ಯನವರ ಅತ್ಯಂತ ವ್ಯವಸ್ಥಿತವಾಗಿ ನಿವೇಶನ ಕಬಳಿಸಿದ್ದು, ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಹೋರಾಟಕ್ಕೆ ಮುಂದಾದರೆ ಅವರನ್ನು ಬಂಧಿಸುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಬಂಧನದ ಬೆನ್ನಲ್ಲೇ ಶಾಸಕ ಬಸವನಗೌಡ ದದ್ದಲ್ ತನ್ನನ್ನೂ ಬಂಧಿಸುವಂತೆ ದುಂಬಾಲು ಬಿದ್ದಿದ್ದಾರೆ. ಈಡಿ ಅಧಿಕಾರಿಗಳಿಂದ ಬಂಧನವಾದ ಕೂಡಲೇ ನಾಟಕವಾಡುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ಪರಮ ಭ್ರಷ್ಟ ಸರಕಾರ ಎಂದು ಅವರು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News