ಹಣಕಾಸು ನಿರ್ವಹಣೆ ಸರಿ ಮಾಡದೆ ಕೇಂದ್ರದ ಮೇಲೆ ಗೂಬೆ : ರಾಜ್ಯ ಸರಕಾರದ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ
ಹುಬ್ಬಳ್ಳಿ : "ರಾಜ್ಯ ಸರಕಾರ ಸರಿಯಾಗಿ ಹಣಕಾಸು ನಿರ್ವಹಣೆ ಮಾಡಲಾಗದೆ, ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಶನಿವಾರ ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯಕ್ಕೆ ಯುಪಿಎ ಅವಧಿಗಿಂತ ದುಪ್ಪಟ್ಟು ಅನುದಾನವನ್ನು ಎನ್‌ಡಿಎ ಸರಕಾರ ನೀಡಿದೆ. ರಾಜ್ಯಗಳಿಗೆ ಅನುದಾನ ಹಂಚಿಕೆ ನಿರ್ಧರಿಸುವುದು ಕೇಂದ್ರ ಸರಕಾರವಲ್ಲ, ಹಣಕಾಸು ಆಯೋಗ. ಅದು ನಿಗದಿಪಡಿಸಿದಷ್ಟು ಹಣವನ್ನು ಕೇಂದ್ರ ನೀಡಿದೆ" ಎಂದು ಸಮರ್ಥಿಸಿದರು.
"2016-17ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಇದ್ದ ಹಣಕಾಸು ಆಯೋಗ ಅನುದಾನ ಹಂಚಿಕೆ ನಿಗದಿಪಡಿಸಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎನಿಸಿದ್ದರೆ ಆಯೋಗದ ಮುಂದೆ ಆಗಲೇ ಸಮರ್ಪಕ ವಾದ ಮಂಡಿಸಬೇಕಿತ್ತು. ಆಗ ಧ್ವನಿ ಎತ್ತದೆ, ಈಗ ತಗಾದೆ ತೆಗೆಯುತ್ತಿದೆ" ಎಂದು ತಿರುಗೇಟು ನೀಡಿದರು.
ʼಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸುತ್ತಿದ್ದು, ಈಗ ಮತ್ತೊಮ್ಮೆ ರಚನೆ ನಡೆದಿದೆ. ಹೊಸ ಹಣಕಾಸು ಆಯೋಗದ ಮುಂದಾದರೂ ರಾಜ್ಯಕ್ಕೆ ಏನು ಬೇಕೆಂಬುದನ್ನು ಸರಿಯಾಗಿ ಮಂಡಿಸಿʼ ಎಂದು ಹೇಳಿದರು.
"ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 49 ಸಾವಿರ ಕೋಟಿ ರೂ.ಅನುದಾನ ಬಂದಿದ್ದರೆ, ಎನ್‌ಡಿಎ ಸರಕಾರ 3 ಲಕ್ಷ ಕೋಟಿ ರೂ. ಕೊಟ್ಟಿದೆ. ಇನ್ನೂ ರಾಜ್ಯದ ಪಾಲಿನ ತೆರಿಗೆ ಬಾಬ್ತು ಯುಪಿಎ ಬರೀ 63 ಸಾವಿರ ಕೋಟಿ ರೂ. ಕೊಟ್ಟಿದ್ದರೆ, ತಮ್ಮ ಸರಕಾರ. 3.25 ಲಕ್ಷ ಕೋಟಿ ರೂ. ತೆರಿಗೆ ಹಂಚಿಕೆ ಬಿಡುಗಡೆ ಮಾಡಿದೆ" ಎಂದರು.